ಮಡಿಕೇರಿ, ಸೆ. 26 : ಉದ್ಯಮಶೀಲರಾಗಿ ಆರ್ಥಿಕವಾಗಿ ಮುಂದಾಗುವಂತೆ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ್ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾ ಕೈಗಾರಿಕಾ ಕೇಂದ್ರ ಸಭಾಂಗಣದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಅಂತಿಮ ವರ್ಷದ ವಿಧ್ಯಾರ್ಥಿಗಳಿಗೆ ಇಂದು ನಡೆದ ಉದ್ಯಮ ಶೀಲತಾ ಜಾಗೃತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ಆರ್ಥಿಕ ನೀತಿಯ ಉದಾರೀಕರಣ ಹಾಗೂ ಅಧಿಕಾರದ ವಿಕೇಂದ್ರಿಕರಣದ ಹಿನ್ನೆಲೆಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಸ್ಥಾಪನೆಗೆ ಸರ್ಕಾರವು ಮಹತ್ವದ ಯೋಜನೆಗಳನ್ನು ರೂಪಿಸಿದೆ. ಇದರ ಬಗ್ಗೆ ತಿಳಿದು ಕೊಂಡು ಆರ್ಥಿಕವಾಗಿ ಮುಂದೆ ಬರುವಂತೆ ಅವರು ಹೇಳಿದರು.

ಜಿಲ್ಲಾ ನಬಾರ್ಡ್‍ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ನಾಣಯ್ಯ ಅವರು ಮಾತನಾಡಿ, ಉದ್ಯಮ ಘಟಕಗಳನ್ನು ಹೆಚ್ಚು ಸ್ಥಾಪನೆ ಮಾಡುವ ಮೂಲಕ ಹೆಚ್ಚು ಉದ್ಯೋಗಾವಕಾಶವನ್ನು ಸೃಷ್ಟಿ ಮಾಡಬಹುದಾಗಿದೆ. ಈ ದಿಸೆಯಲ್ಲಿ ಉದ್ಯಮಶೀಲರಾಗಿ ಮುಂದುವರಿ ಯಲು ಹಾಗೂ ಉತ್ತಮ ಗುಣಮಟ್ಟದ ಮೂಲಭೂತ ಸೌಕರ್ಯಗಳನ್ನು ಪಡೆಯುವಲ್ಲಿ ನಬಾರ್ಡ್ ಹಾಗೂ ಬ್ಯಾಂಕುಗಳಿಂದ ಉದ್ಯಮಗಳ ಸ್ಥಾಪನೆಯ ಸಲುವಾಗಿ ಹಣಕಾಸು ನೆರವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಎಂ.ಎ.ಶಬೀರ್ ಬಾಷ ಮಾತನಾಡಿ ಕೈಗಾರಿಕಾ ನೀತಿಯ ಅನ್ವಯ ಕೈಗಾರಿಕೆ ಸ್ಥಾಪಿಸಲು ಉದ್ಯಮಶೀಲರಿಗೆ ಸೂಕ್ತ ಮಾಹಿತಿ ನೀಡುವದು. ರಿಯಾಯಿತಿ ಹಾಗೂ ಪ್ರೋತ್ಸಾಹಗಳನ್ನು ನೀಡಲಾಗುವದು ಎಂದರು.

ಮೈಸೂರು ಇ.ಡಿ.ಪಿ. ತರಬೇತುದಾರ ಪ್ರದ್ಯುಮ್ನ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯಮ ಕ್ಷೇತ್ರದಲ್ಲಿ ಮುಂದುವರಿಯಲು ಉದ್ಯಮ ಹಾಗೂ ಕೈಗಾರಿಕೆಗಳ ಬಗ್ಗೆ ಪರಿಪೂರ್ಣ ಅಧ್ಯಯನ ಅಥವಾ ಸಂಶೋಧನೆ ಪ್ರಮುಖ ಪಾತ್ರವಹಿಸುತ್ತದೆ. ಇದರ ಜೊತೆಗೆ ನಾಯಕತ್ವದ ಗುಣ, ಆತ್ಮಸ್ಥೈರ್ಯ ಹಾಗೂ ಹಣಕಾಸಿನ ಮುಗ್ಗಟ್ಟುಗಳ ಬಗ್ಗೆ ತಿಳಿದು ಯೋಜನೆಗಳನ್ನು ರೂಪಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತುದಾರ ಸೂರ್ಯ ನಾರಾಯಣ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ದೇವಯ್ಯ, ನಗರದ ಕೈಗಾರಿಕಾ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.