ನಾಪೋಕ್ಲು, ಡಿ. 29 :ಜ್ಞಾನ ದೇಗುಲಗಳಂತಿರುವ ಶಾಲೆಗಳು ಪ್ರತಿಯೊಬ್ಬರ ಬದುಕನ್ನು ರೂಪಿಸುವ ಶಕ್ತಿಯನ್ನು ಹೊಂದಿದ್ದು, ವಿದ್ಯಾರ್ಥಿ ಗಳು ವಿದ್ಯಾರ್ಥಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಬೆಟ್ಟಗೇರಿಯ ಉದಯ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಕೊಡಪಾಲು ಎಸ್. ಗಣಪತಿ ಕರೆ ನೀಡಿದರು.

ಉದಯ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವದ 3 ದಿನಗಳ ಕಾರ್ಯಕ್ರಮಕ್ಕೆ ಕ್ರೀಡಾ ಧ್ವಜಾರೋಹಣದ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನವನ್ನು ಮೈಗೂಡಿಸಿ ಕೊಳ್ಳಬೇಕೆಂದು ಸಲಹೆ ನೀಡಿದರು. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಉನ್ನತ ಹುದ್ದೆಯನ್ನು ಏರಲು ವಿದ್ಯಾರ್ಜನೆ ಅತಿ ಮುಖ್ಯವಾಗಿದೆ. ವಿದ್ಯಾರ್ಥಿಗಳು ಮತ್ತು ಶಾಲೆಗಳ ಅಭಿವೃದ್ಧಿಗೆ ಶಿಕ್ಷಕರು ಹಾಗೂ ಪೋಷಕರ ಸಹಕಾರ ಅಗತ್ಯವೆಂದು ಅಭಿಪ್ರಾಯಪಟ್ಟರು.

ಕ್ರೀಡಾ ಜ್ಯೋತಿಯನ್ನು ಬೆಳಗಿ ಮಾತನಾಡಿದ, ಕೊಡಗು ಜಿಲ್ಲಾ ದೈಹಿಕ ಪರಿವೀಕ್ಷಕ ಮೃತ್ಯುಂಜಯ, ಮನುಷ್ಯ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾದಾಗ ಮಾತ್ರ ಉನ್ನತಿಯನ್ನು ಹೊಂದಲು ಸಾಧ್ಯವೆಂದರು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುವ ಮೂಲಕ ಇತರ ವಿದ್ಯಾರ್ಥಿಗಳಿಗೆ ಮಾದರಿ ಯಾಗ ಬೇಕೆಂದು ಕರೆ ನೀಡಿದರು.

ಉದಯ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಿ.ಎಂ. ಮೇದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಂದ ನಡೆದ ಆಕರ್ಷಕ ಪಥ ಸಂಚಲನದ ಗೌರವ ವಂದನೆಯನ್ನು ವಕೀಲ ಕುಟ್ಟೇಟಿರ ಎ. ಕುಟ್ಟಪ್ಪ ಸ್ವೀಕರಿಸಿದರು. ವಿದ್ಯಾಸಂಸ್ಥೆಯ ಮುಖ್ಯೋ ಪಾಧ್ಯಾಯಿನಿ ಎಂ.ಪಿ. ಕವಿತ ಆಟೋಟಗಳಿಗೆ ಚಾಲನೆ ನೀಡಿದರು. ವಿದ್ಯಾಸಂಸ್ಥೆಯ ಅಧ್ಯಕ್ಷ ತಳೂರು ಎ. ಕಿಶೋರ್ ಕುಮಾರ್ ಉಪಸ್ಥಿತಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿ ನಾಯಕ ತರುಣ್ ಹಾಗೂ ಆಂಗ್ಲ ಮಾಧ್ಯಮ ನಾಯಕ ಪ್ರಣಮ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಪೋರೇಶನ್ ಬ್ಯಾಂಕಿನ ಬೆಟ್ಟಗೇರಿ ಶಾಖೆಯ ಪ್ರಬಂಧಕರಾದ ಕುಮಾರ್ ಅಭಿಷೇಕ್, ನಾಪೋಕ್ಲು ಕಾಲೇಜಿನ ಉಪನ್ಯಾಸಕಿ ಹಾಗೂ ಉದಯ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಕೆದಂಬಾಡಿ ಕೃಪಾ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಸೀತಮ್ಮ, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಪಾಲ್ಗೊಂಡಿದ್ದರು.

ತಳೂರು ಕಿಶೋರ್ ಕುಮಾರ್ ಸ್ವಾಗತಿಸಿ, ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿ, ನಟೇಶ್ ವಂದಿಸಿದರು. ಕ್ರೀಡಾಕೂಟದ ತೀರ್ಪುಗಾರರಾಗಿ ಮರಗೋಡಿನ ಪ್ರೌಢ ಶಾಲಾ ದೈಹಿಕ ಶಿಕ್ಷಕರಾದ ಕೆದಂಬಾಡಿ ಶಿವಪ್ರಸಾದ್, ರತೀಶ್ ಹಾಗೂ ನಾಗರಾಜ್ ಕಾರ್ಯನಿರ್ವಹಿಸಿದರು.

ಮಧ್ಯಾಹ್ನ ನಂತರ ನಡೆದ ಸಮಾರೋಪ ಸಮಾರಂಭವನ್ನು ಉದಯ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಕೆ.ಎಸ್. ಪುಟ್ಟಣ್ಣಯ್ಯ ಉದ್ಘಾಟಿಸಿದರು. ವಿದ್ಯಾಸಂಸ್ಥೆಯ ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಬೆಟ್ಟಗೇರಿ ವಿಎಸ್‍ಎಸ್‍ಎನ್ ಅಧ್ಯಕ್ಷ ಎಡಿಕೇರಿ ವಾಸುದೇವ, ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ. ಶಾಂತಿ, ಉಪಾಧ್ಯಕ್ಷೆ ಶಾಂತಿ ಸೋಮಣ್ಣ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಡಿ. ಗಣೇಶ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಇಂದಿನ ಕಾರ್ಯಕ್ರಮ

ತಾ. 30 ರಂದು (ಇಂದು) ಕ್ರೀಡಾಕೂಟವನ್ನು ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನೆಯ್ಯಣೀರ ಸತೀಶ್ ಉದ್ಘಾಟಿಸಲಿದ್ದಾರೆ. ಉದಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಕೆ.ಬಿ. ಸೀತಮ್ಮ ಹಾಗೂ ಕಾಫಿ ಬೆಳೆಗಾರ ಬಿ.ಎಂ. ಜಗದೀಶ್ ರೈ ವಿವಿಧ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷÀ ಬಿ.ಎ. ಹರೀಶ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಸಂಜೆ ಹಳೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.