ಮಡಿಕೇರಿ, ಅ. 22: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಾತ್ರ ಸಾಂಪ್ರದಾಯಿಕವಾಗಿ ಕಾಫಿಯನ್ನು ಬೆಳೆಯಲಾಗುತ್ತಿದೆ. ಇದೀಗ ಉತ್ತರ ಭಾರತದ ರಾಜ್ಯವಾದ ನಾಗಾಲ್ಯಾಂಡ್‍ನಲ್ಲಿ ಕಾಫಿ ಬೆಳೆಯನ್ನು ಉತ್ತೇಜಿಸಿ ಅಲ್ಲಿನ ಜನರಲ್ಲಿ ಕಾಫಿ ಬೆಳೆಯಲು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನವೊಂದು ಆರಂಭವಾಗಿದೆ.ನಾಗಾಲ್ಯಾಂಡ್‍ನ ಹಿರಿಯ ಅಧಿಕಾರಿಗಳ ತಂಡವೊಂದು ಕೊಡಗು ಸೇರಿದಂತೆ ಕರ್ನಾಟಕದಲ್ಲಿ ಕಾಫಿ ಬೆಳೆಯುತ್ತಿರುವ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಕೊಡಗು ಜಿಲ್ಲೆಯ ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ, ಚೆಟ್ಟಳ್ಳಿ ಮತ್ತಿತರ ಕಡೆಗಳಿಗೆ ಈ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.

ಬೆಳೆಗಾರರು, ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಈ ತಂಡ ಸಮಾಲೋಚಿಸಿ ಕಾಫಿ ಬೆಳೆಯುವ ವಿಧಾನದ ಕುರಿತು ಮಾಹಿತಿ ಕಲೆ ಹಾಕಿದೆ. ನಾಗಾಲ್ಯಾಂಡ್‍ನ ಐ.ಎ.ಎಸ್. ಅಧಿಕಾರಿ ಅಲ್ಲಿನ ಲ್ಯಾಂಡ್ ರಿಸೋರ್ಸ್ ಡಿಪಾರ್ಟ್‍ಮೆಂಟ್‍ನ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ವೈ. ಕಿಕಾಟೊ ಸೀಮಾ ನೇತೃತ್ವದಲ್ಲಿ 6 ಮಂದಿ ಅಧಿಕಾರಿಗಳ ತಂಡ ರಾಜ್ಯಕ್ಕೆ ಭೇಟಿ ನೀಡಿದೆ. ಚಿಕ್ಕಮಗಳೂರಿನ ಸೆಂಟ್ರಲ್ ಕಾಫಿ ರೀಸರ್ಚ್ ಇನ್ಸ್ಟಿಟ್ಯೂಟ್, ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರಗಳಿಗೂ ತೆರಳಿದ ಈ ತಂಡ ವಿಜ್ಞಾನಿಗಳಿಂದಲೂ ಕಾಫಿ ಬೆಳೆಯ ವಿಧಾನದ ಕುರಿತು ವಿವರ ಪಡೆದು ಮರಳಿರುವದಾಗಿ ತಿಳಿದುಬಂದಿದೆ.

ಈ ತಂಡಕ್ಕೆ ನೆರವಾಗಿ ದೆಹಲಿಯಿಂದ ಕಾಫಿ ಮಂಡಳಿಯ ಸಹಾಯಕ ಕಾರ್ಯದರ್ಶಿ ತಿಮ್ಮೇಗೌಡ ಅವರನ್ನು ಮಂಡಳಿ ನಿಯೋಜಿಸಿದ್ದು, ಇವರೂ ನಾಗಾಲ್ಯಾಂಡ್ ಅಧಿಕಾರಿಗಳೊಂದಿಗೆ ಆಗಮಿಸಿದ್ದರು. ಪ್ರಸ್ತುತ ಕರ್ನಾಟಕ, ಕೇರಳ, ತಮಿಳುನಾಡುವಿನಲ್ಲಿ ಹೆಚ್ಚಾಗಿ ಕಾಫಿ ಉತ್ಪಾದಿಸಲಾಗುತ್ತಿದೆ. ಈಶಾನ್ಯ ಭಾರತದ ಕೆಲವೆಡೆ ಸಾಂಪ್ರದಾಯಿಕವಾಗಿ ಅಲ್ಲದೆ ಅಲ್ಪ ಪ್ರಮಾಣದ ಕಾಫಿ ಉತ್ಪಾದಿಸಲಾಗುತ್ತಿದೆ.

ಇದೀಗ ನಾಗಾಲ್ಯಾಂಡ್‍ನಲ್ಲಿ ಅರಣ್ಯ ನಾಶ ತಪ್ಪಿಸಲು ಕಾಫಿ ಬೆಳೆಸಲು ಚಿಂತನೆ ನಡೆದಿದ್ದು, ಈ ಬಗ್ಗೆ ಅಲ್ಲಿನ ಸ್ಥಳೀಯರನ್ನು ಪ್ರೇರೇಪಿಸುವಂತೆ ಮಾಡಲು ನಾಗಾಲ್ಯಾಂಡ್ ಸರಕಾರ ಯೋಜನೆ ಹಮ್ಮಿಕೊಂಡಿದೆ ಎನ್ನಲಾಗಿದೆ. ಅಧಿಕಾರಿಗಳು ಬೆಳೆಗಾರರು, ತಜ್ಞರಿಂದ ಮಾಹಿತಿ ಪಡೆದು ತೆರಳಿರುವ ಈ ತಂಡ ಅಲ್ಲಿನ ಸರಕಾರದೊಂದಿಗೆ ಸಮಾಲೋಚಿಸಿ ಕಾಫಿ ಬೆಳೆಸುವ ಪ್ರಯತ್ನಕ್ಕೆ ಚಾಲನೆ ನೀಡಲಿದೆ ಎಂದು ತಿಳಿದುಬಂದಿದೆ. ರೋಬಸ್ಟಾ ಹಾಗೂ ಅರೇಬಿಕಾ ತೋಟಗಳಿಗೆ ತೆರಳಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಎರಡು ತಳಿಗಳನ್ನು ಬೆಳೆಯುವ ವಿಧಾನದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

ಪ್ರಸ್ತುತ ನಾಗಾಲ್ಯಾಂಡ್‍ನಲ್ಲಿ ಭತ್ತ, ತರಕಾರಿಯಂತಹ ಬೆಳೆಗಳನ್ನು ಬೆಳೆಸಲಾಗುತ್ತಿದ್ದು, ಜನರ ಆರ್ಥಿಕ ಪರಿಸ್ಥಿತಿಯೂ ಕಷ್ಟದಲ್ಲಿದೆ. ಬೇರೆ ಬೆಳೆ ಬೆಳೆಯಲು ಮರಗಳನ್ನು ಕಡಿಯುವದರಿಂದ ಅರಣ್ಯ ಪ್ರದೇಶದ ಪ್ರಮಾಣ ಕಡಿಮೆಯಾಗುತ್ತಿದೆ. ಕಾಫಿ ಬೆಳೆಯುವವರು ತೋಟದಲ್ಲಿ ಮರಗಳನ್ನು ಪೋಷಿಸಿದ್ದರಿಂದ, ಅರಣ್ಯ ಅಭಿವೃದ್ಧಿ ಆಗಲಿದೆ ಎಂಬ ಚಿಂತನೆಯಿಂದ ನಾಗಾಲ್ಯಾಂಡ್ ಸರಕಾರ ಈ ಚಿಂತನೆ ನಡೆಸಿದೆ ಎನ್ನಲಾಗಿದೆ.