ಮಡಿಕೇರಿ, ನ. 26: ಜಿಲ್ಲೆಯ ಸರಕಾರಿ ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಾಶಾಲೆಗಳ ಮುಖ್ಯ ಶಿಕ್ಷಕರ ಸಭೆ ಜಿಲ್ಲಾಧಿಕಾರಿ ಡಾ. ವಿನ್ಸೆಂಟ್ ಡಿಸೋಜ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ನಗರದ ಸಂತ ಮೈಕಲರ ಶಾಲಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸೆಪ್ಟೆಂಬರ್ ಮಾಹೆಯಲ್ಲಿ ನಡೆಸಲಾದ ಎಸ್.ಎಸ್.ಎಲ್.ಸಿ. ಅರ್ಧ ವಾರ್ಷಿಕ ಪರೀಕ್ಷೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಜಿಲ್ಲೆಯ ಎಲ್ಲಾ ಮುಖ್ಯ ಶಿಕ್ಷಕರು ತಮ್ಮ ಶಾಲೆಯು ಪ್ರಸಕ್ತ ವರ್ಷದಲ್ಲಿ ಶೇ. 100 ಫಲಿತಾಂಶವನ್ನು ಪಡೆಯಲು ಶ್ರಮಿಸಬೇಕು. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ವಿಶೇಷ ಆದ್ಯತೆ ನೀಡಿ ಅವರೂ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಶ್ರಮವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಸರ್ಕಾರದ ಶೈಕ್ಷಣಿಕ ಯೋಜನೆಗಳು ಪ್ರತೀ ವಿದ್ಯಾರ್ಥಿಗೂ ತಲಪಬೇಕು. ಅಲ್ಲದೆ 10ನೇ ತರಗತಿಗೆ ಗಮನ ನೀಡುವಂತೆ 8 ಮತ್ತು 9ನೇ ತರಗತಿಗಳಿಗೆ ಪ್ರಾರಂಭದಿಂದಲೇ ಹೆಚ್ಚಿನ ಆದ್ಯತೆ ನೀಡಲು ಸೂಚಿಸಿದರು. ಇದರಿಂದ ಶಿಕ್ಷಕರ ಹೊರೆ ಕಡಿಮೆಯಾಗುವದೊಂದಿಗೆ ವಿದ್ಯಾರ್ಥಿಗಳ ಕಲಿಕೆಯೂ ಸುಗಮವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಳೆದ ಸಾಲಿನಲ್ಲಿ ಉತ್ತಮ ಫಲಿತಾಂಶ ಪಡೆದ ಶಾಲೆಗಳನ್ನು ಶ್ಲಾಘಿಸಿದರು. ಪ್ರಸ್ತುತ ಸಾಲಿನ ಎಸ್.ಎಸ್.ಎಲ್.ಸಿ. ಪರಿಕ್ಷೆಯ ಫಲಿತಾಂಶವನ್ನು ಉತ್ತಮಪಡಿಸಲು ಎಲ್ಲಾ ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಿಸಲು ಸೂಚಿಸಿದರು. ಸಭೆಗೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯಲ್ಲಿ ಮಕ್ಕಳ ಸುರಕ್ಷತೆಗಾಗಿ ಮುಖ್ಯ ಶಿಕ್ಷಕರು ವಹಿಸಬೇಕಾದ ಜಾಗೃತಾ ಕ್ರಮಗಳ ಬಗ್ಗೆ ಹಲವು ಮಾಹಿತಿ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಆರ್. ಬಸವರಾಜು ಮಾತನಾಡಿ, ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಉತ್ತಮಪಡಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮರ್ಗದರ್ಶನ ನೀಡಿದರು. ತಾವು ಶಾಲೆಗಳಿಗೆ ಭೇಟಿ ನೀಡಿದಾಗ ಗಮನಿಸಿದ ಅಂಶಗಳನ್ನು ವಿಶ್ಲೇಷಿಸಿದರು. ಪರೀಕ್ಷೆಯ ಫಲಿತಾಂಶವನ್ನು ತಾಲೂಕುವಾರು, ಶಾಲಾವಾರು ಹಾಗೂ ವಿಷಯವಾರು ವಿಶ್ಲೇಷಣೆ ಮಾಡಿ ಪಿ.ಪಿ.ಟಿ. ಪ್ರೆಸಂಟೇಶನ್ ಮೂಲಕ ಮಾಹಿತಿ ನೀಡಲಾಯಿತು.

ಈ ಫಲಿತಾಂಶದೊಂದಿಗೆ 2015-16ನೇ ಸಾಲಿನ ವಾರ್ಷಿಕ ಪರೀಕ್ಷಾ ಫಲಿತಾಂಶವನ್ನು ತುಲನೆ ಮಾಡಲಾಯಿತು. ಕಳೆದ ಸಾಲಿನಲ್ಲಿ ಶೇ. 100 ರಷ್ಟು ಸಾಧನೆ ಮಾಡಿದ ಹಾಗೂ ಉತ್ತಮ ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರೊಂದಿಗೆ ಉತ್ತಮ ಫಲಿತಾಂಶ ಪಡೆಯಲು ಅವರು ಕೈಗೊಂಡ ತಂತ್ರಗಳ ಕುರಿತು ಚರ್ಚಿಸಲಾಯಿತು. ಅಂತೆಯೇ ಕನಿಷ್ಟ ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರೊಂದಿಗೆ ಚರ್ಚಿಸಿ ಕಡಿಮೆ ಸಾಧನೆಗೆ ಕಾರಣಗಳು ಮತ್ತು ಪ್ರಸ್ತುತ ಸಾಲಿನಲ್ಲಿ ಉತ್ತಮ ಪಡಿಸಲು ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಮಾರ್ಗದರ್ಶನ ನೀಡಲಾಯಿತು.

2016-17ನೇ ಸಾಲಿನ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಉತ್ತಮ ಪಡಿಸಲು (ಶೇ. 100 ಸಾಧನೆ ಮಾಡಲು) ಮುಖ್ಯ ಶಿಕ್ಷಕರು ತಮ್ಮ ಶಾಲೆಯ ಶಿಕ್ಷಕರು ಹಾಗೂ ತಾವೂ ವಿದ್ಯಾರ್ಥಿಗಳನ್ನು ದತ್ತು ತೆಗೆದು ಕೊಂಡಿರುವದು, ವಿಶೇಷ ತರಗತಿಗಳ ವೇಳಾಪಟ್ಟಿ ತಯಾರಿಸಿ ಅದರಂತೆ ಶಾಲಾ ಅವಧಿಯ ಮೊದಲ ಮತ್ತು ನಂತರ ತರಗತಿ ನಿರ್ವಹಣೆ ವಿದ್ಯಾರ್ಥಿಗಳ ಗುಂಪು ಚಟುವಟಿಕೆ ಪೋಷಕರ ಸಭೆ ಕರೆದು ಅವರೊಂದಿಗೆ ಚರ್ಚೆ-ಸಂವಹನ ಜನವರಿಯ ನಂತರ ವಿದ್ಯಾರ್ಥಿಗಳನ್ನು ಶಾಲೆಗಳಲ್ಲಿಯೇ ಉಳಿಸಿ ರಾತ್ರಿ ತರಗತಿ ನಡೆಸುವದು... ಹೀಗೆ ಹಲವು ಹಂತದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಗೆ ವಿವರಿಸಲಾಯಿತು.

ಸಭೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿಯ ಪಿ.ಪಿ.ಟಿ.ಯನ್ನು ಪ್ರಸ್ತುತ ಪಡಿಸಲಾಯಿತು.