ಮಡಿಕೇರಿ, ನ. 24: ಇತ್ತೀಚೆಗೆ ರಾಜ್ಯಾದ್ಯಂತ ಕಂಡು ಕೇಳರಿಯದ ಹಿಂದೂಗಳ ಭೀಕರ ಹತ್ಯೆಗಳು ನಡೆಯುತ್ತಿರುವದು ದಿನ ನಿತ್ಯದ ವಿಷಯವಾಗಿದ್ದು, ಕರ್ನಾಟಕ ರಾಜ್ಯ ಗೂಂಡಾ ರಾಜ್ಯದಿಂದ ಭಯೋತ್ಪಾದನೆ ಕರಿನೆರಳಿನಲ್ಲಿ ನಲುಗುತ್ತಿರುವದು ಗೋಚರಿಸುತ್ತದೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಆರೋಪಿಸಿದ್ದು, ಜಿಲ್ಲೆಯಲ್ಲಿ ಉಗ್ರ ಚಟುವಟಿಕೆ ನಿಗ್ರಹಿಸುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ನೀಡಿರುವ ಹೇಳಿಕೆಯು ಒಂದೆಡೆ ಉಗ್ರರ ವಿರುದ್ಧ ಭಾರತದ ಗಡಿಗಳಲ್ಲಿ ಸೈನಿಕರು ತೀವ್ರ ರೀತಿಯ ಹೋರಾಟ ಕೈಗೊಂಡಿರುವಾಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರವೇ ಉಗ್ರರಿಗೆ ರಕ್ಷಣೆ ನೀಡುತ್ತಿರುವದು ಮತ್ತು ಉಗ್ರ ಹತ್ಯೆಗಳಲ್ಲಿ ಸರಕಾರದ ಸಚಿವರುಗಳೇ ಪಾಲ್ಗೊಂಡಿರುವ ಅಂಶಗಳು ಬೆಳಕಿಗೆ ಬಂದಿರುವದು ಗೋಚರಿಸುತ್ತಿದೆ. ಬೆಂಗಳೂರಿನ ರುದ್ರೇಶ್ ಹತ್ಯೆಯಲ್ಲು ಸಚಿವ ರೋಶನ್ ಬೇಗ್ ಹೆಸರು ಕೇಳಿ ಬರುತ್ತಿರುವದೇ ಇದಕ್ಕೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಮಂಗಳೂರಿನ ಪ್ರಶಾಂತ್ ಪೂಜಾರಿ, ಕೊಡಗಿನ ಕುಟ್ಟಪ್ಪ, ಕುಶಾಲನಗರದ ಪ್ರವೀಣ್ ಪೂಜಾರಿ, ಮೈಸೂರಿನ ರಾಜು ಮತ್ತು ರವಿ ಸರಣಿಯಾಗಿ ಪೈಶಾಚಿಕ ರೀತಿಯ ಹತ್ಯೆಗಳು ಉಗ್ರರ ರೀತಿಯನ್ನೇ ನೆನಪಿಸುತ್ತದೆ. ದೇಶ ಭಕ್ತರಲ್ಲಿ ಭಯ ಮೂಡಿಸುತ್ತದೆ. ಮತ್ತೊಂದೆಡೆ ಸರಕಾರದ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ಇನ್ನಿತರ ಅಧಿಕಾರಿಗಳ ಸಾವು ಆತ್ಮಹತ್ಯೆಯೇ ಎಂಬ ಪ್ರಶ್ನಾರ್ಥಕ ಭಾವ ರಾಜ್ಯದ ಜನತೆಯಲ್ಲಿ ಮೂಡುತ್ತದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಟಿಪ್ಪು ಗಲಾಟೆಯಲ್ಲಿ ಕುಟ್ಟಪ್ಪ ಅವರ ಹತ್ಯೆ, ಕುಶಾಲನಗರದಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆದ ಪ್ರವೀಣ್ ಪೂಜಾರಿ ಅವರ ಹತ್ಯೆ, ಈ ಹಿಂದೆ ಮಕ್ಕಂದೂರಿನ ನಂದಕುಮಾರ್ ಅವರನ್ನು (ಗಣೇಶ್) ಭೀಕರವಾಗಿ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದಾಗಲೇ ಪೊಲೀಸ್ ಇಲಾಖೆ ಎಚ್ಚರಗೊಂಡಿದ್ದರೆ ಬಹುಶ ರಾಜ್ಯಾದ್ಯಂತ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದಿತ್ತು. ಆದರೆ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಹಸ್ತಕ್ಷೇಪದಿಂದಾಗಿ ಹಿಂದೂಪರ ಬಿಜೆಪಿ ಕಾರ್ಯಕರ್ತರ ಹತ್ಯೆ ನಿರಂತರವಾಗಿ ಮುಂದುವರೆದಿದೆ. ನವೆಂಬರ್ 10 ಟಿಪ್ಪುವಿನ ಜಯಂತಿ ಎಂಬ ದಿನ ಜಿಲ್ಲೆಯಲ್ಲಿ ಗಲಾಟೆಯಾಗದ್ದನ್ನು ಮನಗಂಡ ದುಷ್ಕರ್ಮಿಗಳು ಸೋಮವಾರಪೇಟೆಯ ಐಗೂರು ಎಂಬಲ್ಲಿ ಮುಸಲ್ಮಾನರ ಪವಿತ್ರ ಗ್ರಂಥವಾದ ಕುರಾನ್ ಅನ್ನು ಸುಟ್ಟು ಅದಕ್ಕೆ ಪ್ರತೀಕಾರ ಎಂಬ ಭಾವನೆ ಮೂಡಿಸುವಂತೆ ಆರ್.ಎಸ್.ಎಸ್. ಸೋಮವಾರಪೇಟೆ ತಾಲೂಕಿನ ಕಾರ್ಯವಾಹ ಪದ್ಮನಾಭ ಅವರ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ಎಸೆಯುವ ಮೂಲಕ ಮತ್ತೊಮ್ಮೆ ಜಿಲ್ಲೆಯಲ್ಲಿ ಉಗ್ರರ ಚಟುವಟಿಕೆ ಜೀವಂತ ಎಂಬದನ್ನು ಸಾಕ್ಷೀಕರಿಸಿವೆ.
ತಕ್ಷಣವೇ ಪದ್ಮನಾಭ ಅವರ ಕಾರಿನ ಮೇಲೆ ನಡೆದಿರುವ ಪೆಟ್ರೋಲ್ ಬಾಂಬ್ ಧಾಳಿಯ ಪ್ರಕರಣವನ್ನು ಬೇಧಿಸಿ ದುಷ್ಕರ್ಮಿಗಳನ್ನು ತಕ್ಷಣವೇ ಶಿಕ್ಷೆಗೊಳಪಡಿಸಿ ಅದರ ಹಿಂದಿನ ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಬೇಕು. ಇನ್ನು ಮುಂದೆ ಈ ರೀತಿಯ ಕೃತ್ಯಗಳು ನಡೆದಲ್ಲಿ ಎಚ್ಚೆತ್ತ ಸಮಾಜ ಸಂಘಟಿತವಾಗಿ ತಕ್ಕ ಪ್ರತ್ಯುತ್ತರವನ್ನು ನೀಡಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ಹೇಳಿದ್ದಾರೆ.