ಶ್ರೀನಗರ, ಸೆ. 18: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನಲ್ಲಿರುವ ಸೇನಾ ಪ್ರಧಾನ ಕಚೇರಿ ಮೇಲೆ ಧಾಳಿ ನಡೆಸಿದ್ದಾರೆ. ಕಳೆದ ದಶಕಗಳಲ್ಲಿ ಈ ಧಾಳಿ ಭಾರೀ ಪ್ರಮಾಣದ್ದಾಗಿರುವದಾಗಿ ತಿಳಿದುಬಂದಿದೆ.ಉಗ್ರರ ಗುಂಪು ಇಂದು ಬೆಳಿಗ್ಗೆ 5.30ರ ಸುಮಾರಿಗೆ ಸೇನಾ ಪ್ರಧಾನ ಕಚೇರಿ ಮೇಲೆ ಧಾಳಿ ನಡೆಸಿದ್ದು, ಕಚೇರಿಯ ಒಳಭಾಗದಲ್ಲಿ ಬಾಂಬ್ ಸ್ಫೋಟ ನಡೆಸಿದೆ. ಗಡಿಯಲ್ಲಿರುವ ಭದ್ರತಾ ಕಂಬಿಗಳನ್ನು ಮುರಿದು ಒಳನುಗ್ಗಿರುವ ಉಗ್ರರು, ಸೇನಾ ಪ್ರಧಾನ ಕಚೇರಿ ಎದುರೇ ಬಾಂಬ್ ಸ್ಫೋಟಿಸಿದ್ದಾರೆ. ಅಲ್ಲದೆ, ಅಮಾನುಷವಾಗಿ ಯೋಧರ ಮೇಲೆ ಗುಂಡಿನ ಧಾಳಿ ನಡೆಸಿದ್ದಾರೆ. ಪರಿಣಾಮ 12 ಕ್ಕೂ ಹೆಚ್ಚು ಯೋಧರು ಗಂಭೀರವಾಗಿ ಗಾಯಗೊಂಡಿದ್ದು, 17 ಯೋಧರು ಹುತಾತ್ಮರಾಗಿದ್ದಾರೆ.
ಉಗ್ರರು ಧಾಳಿ ನಡೆಸುತ್ತಿದ್ದಂತೆ ಪ್ರತಿಧಾಳಿ ನಡೆಸಿದ್ದ ಭಾರತೀಯ ಸೇನಾ ಪಡೆ, ಕಾರ್ಯಾಚರಣೆ ನಡೆಸಿ ನಾಲ್ವರು ಉಗ್ರರನ್ನೂ ಸದೆಬಡಿಯು ವಲ್ಲಿ ಯಶಸ್ವಿಯಾಗಿದೆ. ಸ್ಥಳದಲ್ಲಿ ಈಗಾಗಲೇ ವಿಶೇಷ ಸೇನಾ ದಳ ಬೀಡುಬಿಟ್ಟಿದ್ದು, ಗಾಯಗೊಂಡ ಯೋಧರನ್ನು ರಕ್ಷಣೆ ಮಾಡುತ್ತಿದೆ. ಗಾಯಗೊಂಡ ಯೋಧರನ್ನು ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಧಾಳಿ ಹಿನ್ನೆಲೆ ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರು ಕೈಗೊಂಡಿದ್ದ ರಷ್ಯಾ ಮತ್ತು ಅಮೇರಿಕಾ ಪ್ರವಾಸವನ್ನು
(ಮೊದಲ ಪುಟದಿಂದ) ರದ್ದುಗೊಳಿಸಲಾಗಿದೆ. ಉಗ್ರಗಾಮಿಗಳನ್ನು ಹುಟ್ಟು ಹಾಕುತ್ತಿರುವ ಪಾಕಿಸ್ಥಾನವನ್ನು ವಿಶ್ವ ರಾಷ್ಟ್ರಗಳು ಮಾನ್ಯತೆ ನೀಡದೆ ಪ್ರತ್ಯೇಕಿಸುವಂತೆ ಸಚಿವ ರಾಜ್ನಾಥ್ ಸಿಂಗ್ ವಿಶ್ವದ ಇತರ ರಾಷ್ಟ್ರಗಳಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಧಾಳಿ ಕುರಿತಂತೆ ಗೃಹ ಸಚಿವರು ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿದ್ದಾರೆ. ಧಾಳಿಗೆ ಪಾಕಿಸ್ಥಾನ ಬೆಂಬಲಿತ ಜೈಷೆ ಮಹಮ್ಮದ್ ಉಗ್ರ ಸಂಘಟನೆ ಕಾರಣವಾಗಿದೆ ಎಂದು ಪತ್ತೆಯಾಗಿದೆ. ಉಗ್ರರು ಬಳಸಿದ್ದ ಶಸ್ತ್ರಾಸ್ತ್ರಗಳಲ್ಲಿ ಪಾಕಿಸ್ಥಾನದ ಮುದ್ರೆಯಿರುವದು ಕಂಡುಬಂದಿದೆ. ಪ್ರಧಾನಿ ಮೋದಿ ಹಾಗೂ ಭಾರತೀಯ ಸೇನಾ ಪಡೆ ಅಧಿಕಾರಿಗಳು ಈ ಧಾಳಿಗೆ ತಕ್ಕ ಉತ್ತರ ನೀಡುವದಾಗಿ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಗುಪ್ತಚರ ಇಲಾಖೆ ಮಾಹಿತಿಯನ್ವಯ ಮೂರು ಆತ್ಮಾಹುತಿ ಧಾಳಿಯ ತಂಡಗಳು ಪಾಕ್ ಆಕ್ರಮಿತ ಪ್ರದೇಶದಿಂದ ಕಾಶ್ಮೀರ ಗಡಿಯೊಳಗೆ ಪ್ರವೇಶಿಸಿದ್ದು ಇನ್ನೂ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಇದೀಗ ಭಾರತ- ಪಾಕ್ ನಡುವೆ ಸಮರ ರೀತಿಯ ವಾತಾವರಣ ಮೂಡಿರುವದಾಗಿ ಅನೇಕ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.