ಮಡಿಕೇರಿ, ನ. 2: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸರ್ಕಾರದಿಂದ ನಿರ್ಮಾಣಗೊಂಡಿರುವ ಈಜುಕೊಳ ಹಾಗೂ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಅವ್ಯವಸ್ಥೆಯಿಂದ ಕೂಡಿದೆ ಎಂದು ಕ್ರೀಡಾಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಇಂದು ನಡೆಯಿತು.ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸದಸ್ಯರಾದ ಪಿ.ಡಿ. ಪೊನ್ನಪ್ಪ, ಉಣ್ಣಿಕೃಷ್ಣ, ಕೆ.ಎಸ್. ರಮೇಶ್, ಮಾಜಿ ಸದಸ್ಯ ಜೀವನ್, ಕಾಳಚಂಡ ಅಪ್ಪಣ್ಣ ಸೇರಿದಂತೆ ಕ್ರೀಡಾಭಿಮಾನಿಗಳ ತಂಡ ಸ್ಥಳಕ್ಕೆ ತೆರಳಿ ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಕರಿಯಪ್ಪ ಇವರುಗಳನ್ನು ಸ್ಥಳಕ್ಕೆ ಕರೆಯಿಸಿ ಅಸಮಾಧಾನ ಹೊರ ಹಾಕಿದರು. ಈಜುಕೊಳದ ಒಳಗೆ ಟೈಲ್ಸ್ ಕಿತ್ತು ಹೋಗಿದೆ. ಬ್ಯಾಡ್ಮಿಂಟನ್ ಕೋರ್ಟ್‍ನಲ್ಲಿ ಮಳೆಯ ಸಂದರ್ಭ ನೀರು ಸೋರುವದಲ್ಲದೆ, ಮಂಜಿನ ತೇವಕ್ಕೆ ಸಿಲುಕು ನೆಲ ಒದ್ದೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕ್ರೀಡಾಂಗಣ ಮೂಲೆ ಗುಂಪಾಗುತ್ತಿದೆ ಎಂದು ಕ್ರೀಡಾಭಿಮಾನಿಗಳು ವಿಷಾಧಿಸಿದರು.

ತಾ. 20ರೊಳಗಾಗಿ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಸಾರ್ವಜನಿಕರ ಸಹಕಾರದಿಂದ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಎಚ್ಚರಿಕೆಯಿತ್ತರು. ಆದಷ್ಟು ಕ್ರಮಕೈಗೊಳ್ಳುವದಾಗಿ ಅಧಿಕಾರಿ ಜಯಲಕ್ಷ್ಮಿ ಬಾಯಿ ಭರವಸೆಯಿತ್ತರು.