ಗೋಣಿಕೊಪ್ಪಲು, ನ. 20: ಕೊಡಗಿನಲ್ಲಿ ಕಳೆದ ಬಾರಿ ಮಳೆ ಇದ್ದಾಗ ಕೃಷಿ ಹುಟ್ಟುವಳಿಗೆ ಯೋಗ್ಯ ಬೆಲೆ ಇರಲಿಲ್ಲ. ಈ ಬಾರಿ ಮಳೆಯೂ ಇಲ್ಲ, ಬೆಳೆಯೂ ಇಲ್ಲ. ರೈತರನ್ನು ಆ ದೇವರೇ ಕಾಪಾಡಬೇಕು. ಕೃಷಿಯಲ್ಲಿ ಲಾಭವಿದ್ದಲ್ಲಿ ರೈತರು ಮಹಾನಗರಗಳಿಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿರಲಿಲ್ಲ. ರೈತರ ಸಂಕಷ್ಟಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸ್ಪಂದಿಸುವಂತಾಗಬೇಕು ಎಂದು ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ ನುಡಿದರು.ಬಾಳೆಲೆ ಕೊಡವ ಸಮಾಜ ಆವರಣದಲ್ಲಿ ಇತ್ತೀಚೆಗೆ ಜರುಗಿದ ಹೋಬಳಿ ಮಟ್ಟದ ಕೃಷಿ ಅಭಿಯಾನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತ ಕೃಷಿ ಪ್ರಧಾನ ರಾಷ್ಟ್ರ. ಇಲ್ಲಿನ ರೈತ ಉಳಿದರೆ, ದೇಶ ಉಳಿಯಬಲ್ಲದು ಎಂಬ ನಂಬಿಕೆಯಿಂದ ಈ ಹಿಂದೆ ಹಸಿರು ಕ್ರಾಂತಿ ಮೂಲಕ ಕೃಷಿಕರಿಗೆ ಒತ್ತಾಸೆಯಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಅನುದಾನ ರೈತರ ಮನೆ ಬಾಗಿಲಿಗೆ ತಲಪುತ್ತಿಲ್ಲ. ರೈತರು ಸಾಲದಲ್ಲಿಯೇ ಹುಟ್ಟಿ, ಸಾಲದಲ್ಲಿಯೇ ಬದುಕಿ, ಸಾಲದಲ್ಲಿಯೇ ಸಾಯುವಂತಹ ಸ್ಥಿತಿ ಇಂದು ಎಲ್ಲೆಡೆ ಕಾಣುತ್ತಿದೆ. ಸರ್ಕಾರದ ಪರಿಹಾರ ಧನ ಹೆಚ್ಚಳವಾಗದಿದ್ದಲ್ಲಿ ಭತ್ತದ ಕೃಷಿಯೂ ಒಳಗೊಂಡಂತೆ ಎಲ್ಲ್ಲಾ ಕೃಷಿಯನ್ನು ಹಂತ ಹಂತವಾಗಿ ರೈತರು ಮೊಟಕುಗೊಳಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಮಾತನಾಡಿ, ಮಳೆಯಾಶ್ರಿತ ಜಿಲ್ಲೆಯ ಭತ್ತ ಬೆಳೆಯುವ ಪ್ರದೇಶಕ್ಕೆ ಸರ್ಕಾರದ ಪರಿಹಾರ ಮೊತ್ತ ರೂ.6 ಸಾವಿರ ಏನೇನೂ ಸಾಲದು. ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಭತ್ತ ಬೆಳೆದ ರೈತರ ಮಡಿಗಳಲ್ಲಾದ ನಷ್ಟದ ಅಂದಾಜನ್ನು ಜಂಟಿ ಸರ್ವೆ ಕಾರ್ಯ ಮೂಲಕ ಮಾಡಬೇಕಾಗಿದೆ. ಬರಗಾಲ ಪೀಡಿತ ತಾಲೂಕು ಘೋಷಣೆ ಅಗತ್ಯ ಆಗಬೇಕೆಂದರು. ಗೋಣಿಕೊಪ್ಪಲು ಕೆವಿಕೆ ತೋಟಗಾರಿಕೆ ವಿಷಯ ತಜ್ಞ ಡಾ. ಕೆ.ಎ. ದೇವಯ್ಯ ಮಾತನಾಡಿ, ಜಿಲ್ಲೆಯ ಎಲ್ಲೆಡೆ ಮಳೆಯ ಅಭಾವ ಇದೆ. ಕಾಫಿ ಬೀಜ ಬಲಿಯುವ ಸಂದರ್ಭ ನೀರಿನ ಕೊರತೆ ಉಂಟಾದರೆ ತೂಕ ಹಾಗೂ ಗುಣ ಮಟ್ಟ ಕುಸಿತ ಉಂಟಾಗುತ್ತದೆ.

ಕಾಳು ಮೆಣಸು ಈ ಬಾರಿ ಉತ್ಪಾದನೆಯಲ್ಲಿ ಭಾರೀ ಕುಸಿತ ಉಂಟಾಗಲಿದೆ. ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ಮಳೆಯಾಗದ ಹಿನ್ನೆಲೆ ಜೂನ್ ತಿಂಗಳಿನಲ್ಲಿ ಗಿಡಗಳಲ್ಲಿ ಉತ್ತಮ ಚಿಗುರು ಬರಲು ಸಾಧ್ಯವಾಗಿಲ್ಲ. ಮೆಣಸು ಹಾಗೂ ಕಾಫಿಯ ಗಾತ್ರ ಕುಂಠಿತಗೊಳ್ಳುವ ಸಾಧ್ಯತೆ ಇದ್ದು, ಕೆರೆಗಳಲ್ಲಿ ನೀರಿದ್ದಲ್ಲಿ ಇದೀಗ ನೀರುಣಿಸುವ ಅಗತ್ಯವಿದೆ ಎಂದು ಹೇಳಿದರು. ಕೆವಿಕೆಯ ಕೀಟ ಮತ್ತು ರೋಗ ಶಾಸ್ತ್ರಜ್ಞ ಡಾ. ವೀರೇಂದ್ರ ಕುಮಾರ್ ಮಾತನಾಡಿ, ನೀರಿಲ್ಲದಿದ್ದಲ್ಲಿ ಕಾಳು ಮೆಣಸು ಬಳ್ಳಿ ಬುಡವನ್ನು ತರಗೆಲೆಗಳಿಂದ ಮುಚ್ಚುವದು ಒಳಿತು ಎಂದು ಮಾಹಿತಿ ನೀಡಿದರು. ಪೆÇನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಎನ್.ಎಂ. ಪೂಣಚ್ಚ ಮಾತನಾಡಿ, ಈ ಬಾರಿ ಸೆಪ್ಟೆಂಬರ್ ತಿಂಗಳಿನಲ್ಲಿ ಹಿಂಗಾರು ಮಳೆ ದುರ್ಬಲಗೊಂಡ ಹಿನ್ನೆಲೆ ಕೊಡಗಿನ ಕೃಷಿಯ ಮೇಲೆ ದುಷ್ಪರಿಣಾಮ ಉಂಟಾಗಿದೆ.

ಡಿಸೆಂಬರ್ ಅಥವಾ ಜನವರಿ ಯಲ್ಲಿ ಚಂಡಮಾರುತ ಮೂಲಕ ಮಳೆ ಆಗದಿದ್ದಲ್ಲಿ, ಕಾಫಿ, ಕಾಳುಮೆಣಸು, ಅಡಿಕೆ, ಭತ್ತ ಇತ್ಯಾದಿ ಉಳಿಸುವದು ಕಷ್ಟವಾಗಲಿದೆ ಎಂದರು. ಕೃಷಿ ಬೇಸಾಯದ ಬಗ್ಗೆ ಅರಣ್ಯ ಮಹಾ ವಿದ್ಯಾಲಯದ ಡಾ. ಜಡೇಗೌಡ ಮಾಹಿತಿ ನೀಡಿದರು. ಕಾರ್ಯ ಕ್ರಮವನ್ನು ಪ್ರಗತಿಪರ ಕೃಷಿಕ ಅರಮಣಮಾಡ ರಂಜನ್ ಚಂಗಪ್ಪ ಉದ್ಘಾಟಿಸಿದರು. ಕೊಡಗು ಉಪ ಕೃಷಿ ನಿರ್ದೇಶಕ ಕೆ.ರಾಜು, ವೀರಾಜಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ರೀನಾ, ಬಾಳೆಲೆ ಹೋಬಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮೀರಾ ಮುಂತಾದವರು ಉಪಸ್ಥಿತರಿದ್ದರು. ಕೃಷಿ ಅಭಿಯಾನ ಅಂಗವಾಗಿ ಬಾಳೆಲೆ ಕೊಡವ ಸಮಾಜ ಆವರಣದಲ್ಲಿ ವಸ್ತು ಪ್ರದರ್ಶನ ಮಳಿಗೆಯನ್ನು ತೆರೆಯಲಾಗಿತ್ತು.

ಬಾಳೆಲೆ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಕಾರ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ತರಕಾರಿ ಸಂತೆ ಮೂಲಕ ಗಮನ ಸೆಳೆದರು. ತಾವು ಮನೆಯಲ್ಲಿ ಬೆಳೆದ ತರಕಾರಿಗಳನ್ನು ಮಾರಾಟ ಮಾಡುವದು ಕಂಡು ಬಂತು.

ಬಾಳೆಲೆ ಕ್ಲಸ್ಟರ್ ಶಾಲಾ ಮುಖ್ಯಸ್ಥ ಚಿಕ್ಕದೇವು, ಮುಖ್ಯ ಶಿಕ್ಷಕಿ ಪ್ರೇಮಾವತಿ, ಸಹಶಿಕ್ಷಕಿ ನಾಗಶ್ರೀ, ಸಂಪನ್ಮೂಲ ವ್ಯಕ್ತಿ ಪ್ರಸನ್ನ ಕುಮಾರ್, ಶಿಕ್ಷಕರಾದ ಸಿ.ಕೆ. ಕಸ್ತೂರಿ, ವಸಂತ ಕುಮಾರಿ, ಶೈಲಜ ಮುಂತಾದವರು ಇದ್ದರು.