ಸುಂಟಿಕೊಪ್ಪ, ಸೆ. 30: ಸೆಸ್ಕ್, ಆರೋಗ್ಯ ಇಲಾಖೆ, ಅರಣ್ಯ ಇಲಾಖೆಗಳ ಕಾರ್ಯ ವೈಖರಿಯ ಬಗ್ಗೆ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ಕೊಡಗರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ಬಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಲಾಖೆಗಳ ಅಧಿಕಾರಿಗಳು ನೀಡಿದ ಮಾಹಿತಿಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಸೆಸ್ಕ್ ಇಲಾಖೆಯ ಕಾರ್ಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು, ಈ ಗ್ರಾ.ಪಂ. ವ್ಯಾಪ್ತಿಯ ಕಲ್ಲೂರು, ಅಂದಗೋವೆ, ಕೊಡಗರಹಳ್ಳಿ ಮುಂತಾದ ಭಾಗಗಳಲ್ಲಿ ರಾತ್ರಿ ಸಮಯ ಆಗಾಗ್ಗೆ ವಿದ್ಯುತ್ ಕಡಿತ, ವೋಲ್ಟೇಜ್ ಇಲ್ಲದಿರುವದು ದಿನಿತ್ಯದ ಗೋಳಾಗಿದೆ. ಹಲವಾರು ಬಾರಿ ಟ್ರಾನ್ಸ್ ಫಾರ್ಮ್ ಅಳವಡಿಕೆಗೆ ಮನವಿ ಮಾಡಿದ್ದರೂ ಇಲಾಖೆಯಿಂದ ಯಾವದೇ ಸ್ಪಂದನ ದೊರಕಿಲ್ಲ ಎಂದು ಸೆಸ್ಕ್ ಜೂನಿಯರ್ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಂಟಿಕೊಪ್ಪ ಸೆಸ್ಕ್ ಜೂನಿಯರ್ ಇಂಜಿನಿಯರ್ ಬಸವರಾಜು, ಟ್ರಾನ್ಸ್ ಫಾರ್ಮ್ ಅಳವಡಿಕೆಯ ಹರಾಜು ಪ್ರಕ್ರಿಯೆಯಲ್ಲಿ ವಿಳಂಬವಾದರಿಂದ ಈ ಸಮಸ್ಯೆ ಉದ್ಭವಿಸಿದೆ. ಆದಷ್ಟು ಬೇಗನೇ ಸಮಸ್ಯೆ ಬಗೆಹರಿದು ವಿದ್ಯುತ್ ಸಂಪರ್ಕದಲ್ಲಿ ಯಾವದೇ ತೊಂದರೆಗಳಾಗದಂತೆ ಕ್ರಮ ಕೈಗೊಳ್ಳುವದಾಗಿ ಮಾಹಿತಿ ನೀಡಿದರು.
ಕೊಡಗರಹಳ್ಳಿ-ಕಂಬಿಬಾಣೆ-ಚಿಕ್ಲಿಹೊಳೆ ರಸ್ತೆಯ ವಿಚಾರವಾಗಿ ಭೂಮಿ ಪೂಜೆ ನಡೆದರೂ ಕಾಮಗಾರಿ ಪ್ರಾರಂಭವಾಗದ ಬಗ್ಗೆ ಗ್ರಾಮಸ್ಥರು ಧ್ವನಿಯೆತ್ತಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಲತೀಫ್ ಮತ್ತು ಹಾರಂಗಿ ನೀರಾವರಿ ಇಲಾಖೆಯ ಇಂಜಿನಿಯರ್ ಜಗದೀಶ್, ಈಗಾಗಲೇ ಟೆಂಡರ್ ಪ್ರಕ್ರಿಯೇ ಮುಗಿದಿದ್ದು, ಆದಷ್ಟು ಬೇಗನೆ ಕಾಮಗಾರಿ ಆರಂಭಗೊಳ್ಳಲಿದ್ದು, ಇಲ್ಲಿನ ಗ್ರಾಮಸ್ಥರು ತಾವೇ ಮುಂದೆ ನಿಂತು ತಮಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿಯನ್ನು ಮಾಡಿಸಿಕೊಳ್ಳಿ ಎಂದರು.
ಕಲ್ಲೂರು-ಅಂದಗೋವೆ ಬೈಪಾಸ್ ರಸ್ತೆಯಲ್ಲಿ ಕಾವೇರಿ ತೋಟದ ಸಮೀಪವಿರುವ 3 ಮರಗಳು ರಸ್ತೆಯ ಪಕ್ಕದಲ್ಲಿ ಇರುವದರಿಂದ ಕೂಡಲೇ ಅದನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥ ಸುಬ್ರಮಣಿ ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದರು.
ಅಲ್ಲದೇ ಕೊಡಗರಹಳ್ಳಿ-ಚಿಕ್ಲಿಹೊಳೆ ರಸ್ತೆ ಕಾಮಗಾರಿ ನಡೆಯುವದಕ್ಕೆ ಮೊದಲೇ ಪಿಡಬ್ಲ್ಯೂಡಿ ಇಂಜಿನಿಯರ್‍ಗಳು ತೋರಿಸುವ ಮರಗಳನ್ನು ಕೂಡಲೇ ತೆರವು ಗೊಳಿಸಬೇಕೆಂದು ಅಧ್ಯಕ್ಷ ಅಬ್ಬಾಸ್ ಹೇಳಿಕೆಗೆ ಗ್ರಾಮಸ್ಥರು ದನಿಗೂಡಿಸಿದರು.
ಇದಕ್ಕೆ ಅರಣ್ಯ ಸಿಬ್ಬಂದಿ ಮೇಲಧಿಕಾರಿಗಳಿಗೆ ಮಾಹಿತಿ ನೀಡುವದಾಗಿ ತಿಳಿಸಿದರು.
ಪಡಿತರ ಚೀಟಿದಾರರಿಗೆ ಮಾರಕವಾದ ಕೂಪನ್ ವ್ಯವಸ್ಥೆಯನ್ನು ಕೂಡಲೇ ರದ್ದು ಗೊಳಿಸಬೇಕೆಂದು ಗ್ರಾಮಸ್ಥರು ಅಧ್ಯಕ್ಷರನ್ನು ಒತ್ತಾಯಿಸಿದಲ್ಲದೇ, ಪಡಿತರ ಅಂಗಡಿಯವರು ಸಂಜೆ 4 ಗಂಟೆಯವರೆಗೆ ಮಾತ್ರ ಇರುವದರಿಂದ ಕೂಲಿ ಕಾರ್ಮಿಕರಾದ ನಮಗೆ ಬಹಳ ತೊಂದರೆ ಆಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಈ ಬಗ್ಗೆ ಸುಂಟಿಕೊಪ್ಪ ವಿಎಸ್‍ಎಸ್‍ಎನ್ ಬ್ಯಾಂಕಿನ ಅಧ್ಯಕ್ಷ ಎನ್.ಸಿ. ಪೊನ್ನಪ್ಪ ಮತ್ತು ಗ್ರಾ.ಪಂ. ಅಧ್ಯಕ್ಷ ಪ್ರತಿಕ್ರಿಯಿಸಿ, ಪಡಿತರ ಅಂಗಡಿಯನ್ನು ಮುಚ್ಚಿ ಸಂಚಾರಿ ಪಡಿತರವನ್ನು ವ್ಯವಸ್ಥೆ ಮಾಡಬೇಕೆನ್ನುವ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವದು.
ಸಮಸ್ಯೆ ಆಗದ ರೀತಿಯಲ್ಲಿ ಪಡಿತರ ಅಂಗಡಿಯವರಿಗೆ ಮನವರಿಕೆ ಮಾಡಲಾಗುವದು ಹಾಗೂ ಕೂಪನ್ ವ್ಯವಸ್ಥೆ ಬಗ್ಗೆ ಸರ್ಕಾರಕ್ಕೆ ಮಹಿತಿಯನ್ನು ಗ್ರಾ.ಪಂ.ಯ ಮುಖಾಂತರ ಕಳುಹಿಸಿಕೊಟ್ಟು ಸಮಸ್ಯೆಯ ಪರಿಹಾರವನ್ನು ಕಂಡುಕೊಳ್ಳುವದಾಗಿ ಭರವಸೆ ನೀಡಿದರು.
ಸ್ವಂತ ಜಾಗ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 17 ಮಂದಿ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಸರ್ಕಾರದ ವತಿಯಿಂದ ಅವಕಾಶವನ್ನು ಕಲ್ಪಿಸಲಾಗಿದೆ.
ಅಲ್ಲದೇ 2016-17ನೇ ಸಾಲಿನ ಬಸವ ವಸತಿ ಯೋಜನೆಯಡಿಯಲ್ಲಿ ಪ.ಜಾ. 6, ಪ.ಪಂ. 2, ಸಾಮಾನ್ಯ 13, ಅಲ್ಪಸಂಖ್ಯಾತ ಪಂಗಡಕ್ಕೆ 3 ಹೀಗೆ ಒಟ್ಟು 24 ಮನೆಗಳನ್ನು ಕಟ್ಟುವದಕ್ಕೆ ಅವಕಾಶವಿದೆ. ಆಸಕ್ತರು ಬಿಪಿಎಲ್ ಚೀಟಿ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಜಾಗದ ದಾಖಲಾತಿಯನ್ನು ಗ್ರಾಮ ಪಂಚಾಯಿತಿಗೆ ನೀಡಬೇಕೆಂದು ಇಲ್ಲಿನ ಪಿಡಿಓ ನಂದೀಶ್ ಕುಮಾರ್ ತಿಳಿಸಿದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯ ಪಿ.ಎಂ. ಲತೀಫ್, ತಾ.ಪಂ. ಸದಸ್ಯೆ ಮಣಿ, ನೋಡಲ್ ಅಧಿಕಾರಿ ಬೋಪಯ್ಯ, ಉಪಾಧ್ಯಕ್ಷೆ ಪ್ರೇಮ, ಕಾರ್ಯದರ್ಶಿ ಅಂಜನದೇವಿ, ಸದಸ್ಯರಾದ ಎನ್.ಡಿ. ನಂಜಪ್ಪ, ಉಸ್ಮಾನ್, ವಸಂತ, ಜಯಲಕ್ಷ್ಮಿ, ಲಲಿತ, ಸಲೀಂ, ಸುಮಿತ್ರಾ, ಶಾಲಿನಿ ಇದ್ದರು.