ಸೋಮವಾರಪೇಟೆ, ಜ. 10: ತಾಲೂಕಿನ ಇತಿಹಾಸ ಪ್ರಸಿದ್ಧ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೆ ಮತ್ತು 58ನೇ ಮಹಾರಥೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ತಾ. 13 ರಿಂದ 17 ರವರೆಗೆ ವಿವಿಧ ಪೂಜಾ ವಿಧಿ ವಿಧಾನಗಳೊಂದಿಗೆ ಜಾತ್ರೋತ್ಸವ ನಡೆಯಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ದೇವಾಲಯ ಸಮಿತಿಯ ಸದಸ್ಯ ಎಸ್.ಜಿ. ಮೇದಪ್ಪ ತಿಳಿಸಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ತಾಲೂಕಿನ ಶಾಂತಳ್ಳಿ ಹೋಬಳಿಗೆ ಒಳಪಡುವ ಕೂತಿನಾಡು, ತೋಳುನಾಡು, ಪುಷ್ಪಗಿರಿ, ಯಡೂರು, ತಲ್ತಾರೆಶೆಟ್ಟಳ್ಳಿ ಗ್ರಾಮಸ್ಥರು ವಿಶೇಷವಾಗಿ ಆಚರಿಸಲ್ಪಡುವ ಕುಮಾರಲಿಂಗೇಶ್ವರ ಜಾತ್ರೋತ್ಸವದಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ ಎಂದರು.

ತಾ. 13 ರಂದು ಶುಕ್ರವಾರ ಜಾತ್ರೆ ಪ್ರಾರಂಭಗೊಳ್ಳಲಿದ್ದು, ತಾ. 14 ರ ಶನಿವಾರ ಮಕರ ಸಂಕ್ರಮಣ ಕರುವಿನ ಹಬ್ಬ ನಡೆಯಲಿದೆ. ತಾ. 15 ರ ಭಾನುವಾರ ಅರಸುಬಲ ಸೇವೆ, ತಾ. 16 ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಕುಮಾರಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವ, ಮಧ್ಯಾಹ್ನ 12.10 ರಿಂದ 2.30 ರವರೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸಂಜೆ 6 ಗಂಟೆಗೆ ‘ಮುದುಕನ ಮದುವೆ’ ಎಂಬ ಹಾಸ್ಯ ನಾಟಕ, ತಾ. 17 ರ ಮಂಗಳವಾರ ವಿವಿಧ ಪೂಜಾ ಕಾರ್ಯಕ್ರಮಗಳು, ಬೆಳಿಗ್ಗೆ 10 ರಿಂದ ಆಹ್ವಾನಿತ ನೃತ್ಯ ತಂಡಗಳಿಂದ ನೃತ್ಯ ಪ್ರದರ್ಶನ, ಸಂಜೆ 5 ಗಂಟೆಯಿಂದ ಸುಧಾ ಬರಗೂರು ಮತ್ತು ತಂಡದವರಿಂದ ನಗೆ ಹಬ್ಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ತಾ. 17 ರ ಮಂಗಳವಾರ ಅಪರಾಹ್ನ 2 ಗಂಟೆಗೆ ಜಾತ್ರೆಯ ಸಮಾರೋಪ ಸಮಾರಂಭ ನಡೆಯಲಿದ್ದು, ಲೋಕಾಸಭಾ ಸದಸ್ಯ ಪ್ರತಾಪ್ ಸಿಂಹ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶಾಂತಳ್ಳಿ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಜಿ.ಎಸ್. ರಘು ಕುಮಾರ್ ಅಧ್ಯಕ್ಷತೆ ಯಲ್ಲಿ ನಡೆಯಲಿರುವ ಕಾರ್ಯಕ್ರಮ ದಲ್ಲಿ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ ಪಂಚಾಯಿತಿ ಅಧ್ಯಕ್ಷರುಗಳು, ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಕುಮಾರಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ತಾ. 15 ರ ಭಾನುವಾರ ಮತ್ತು ತಾ. 16 ರ ಸೋಮವಾರ ಅಂತರ ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಾಟಗಳು ಶಾಂತಳ್ಳಿ ಸರ್ಕಾರಿ ಶಾಲಾ ಮೈದಾನದಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕೆ.ಟಿ. ಕೃಷ್ಣಪ್ಪ, ಕೆ.ಕೆ. ವಿಜಯ, ಚಂಗಪ್ಪ ಮತ್ತು ಕೆ.ಟಿ. ಮಧು ಕುಮಾರ್ ಉಪಸ್ಥಿತರಿದ್ದರು.