ಮಡಿಕೇರಿ, ನ. 27: ಹಿಂದಿನ ಇತಿಹಾಸಗಳನ್ನು ತಿಳಿದುಕೊಳ್ಳದೇ ಇರುವ ಯಾರಿಂದಲೂ ಇತಿಹಾಸಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ ಬಹುಜನ ಸೋಷಿಯಲ್ ಫೌಂಡೇಷನ್‍ನ ಅಧ್ಯಕ್ಷ ಬಿ. ಗೋಪಾಲ್ ಜೀ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಹಾಗೂ ಪ್ರಬುದ್ಧ ನೌಕರರ ಒಕ್ಕೂಟದ ಸಹಯೋಗದೊಂದಿಗೆ 2015-16ನೇ ಸಾಲಿನ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಅಂಬೇಡ್ಕರ್ ಅವರ ಜೀವನದ ಇತಿಹಾಸವನ್ನು ತಿಳಿದುಕೊಂಡು ಮನೆ ಮನೆಗೂ ಅದನ್ನು ತಿಳಿಸುವಲ್ಲಿ ಪ್ರಯತ್ನ ಪಡಬೇಕಿದೆ ಎಂದು ಅಭಿಪ್ರಾಯ ಪಟ್ಟರು.

ಡಾ. ಬಿ.ಆರ್ ಅಂಬೇಡ್ಕರ್ ಅವರ ತಮ್ಮ ಹೋರಾಟದ ಪ್ರತಿಫಲವಾಗಿ ಮೀಸಲಾತಿ ಯನ್ನು ಒದಗಿಸಿ ಕೊಡಲು ಸಾಧ್ಯ ವಾಯಿತು ಎಂದರು. ಪ್ರಸ್ತುತ ಈ 21ನೇ ಶತಮಾನದಲ್ಲೂ ನಾವು ಶಿಕ್ಷಣ ಕ್ಷೇತ್ರದಲ್ಲಿ ತೀರಾ ಹಿಂದುಳಿದಿರುವದು ಅತ್ಯಂತ ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.

ಸಮಾಜವಾದಿ ಯುವಜನ ಸಭಾದ ಸಂಸ್ಥಾಪಕ ಸದಸ್ಯರಾದ ಶ್ರೀಧರ್ ಕಲಿವೀರ್ ಮಾತನಾಡಿ, ದಲಿತರ ನಿರಂತರ ಚಳವಳಿಗಳ ಪ್ರತಿಫಲವಾಗಿ ರಾಜ್ಯ ಸರಕಾರ ದಲಿತ ವರ್ಗಗಳ ಸರ್ವತೋಮುಖ ಕಲ್ಯಾಣಕ್ಕಾಗಿ 35 ಕೋಟಿ ರೂ. ಅನುದಾನವನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗೆಳು ಜಿಲ್ಲಾಧಿಕಾರಿಯವರ ಬಳಿ ತೆರಳಿ ಇನ್ನೂ 3 ತಿಂಗಳಲ್ಲಿ ಈ ಅನುದಾನವನ್ನು ವಿನಿಯೋಗಿಸಲು ಮನವಿ ಮಾಡುವಂತೆ ತಿಳಿಸಿದರು. ಮಡಿಕೇರಿಯ ವಕೀಲರಾದ ಕುಂಞÂ ಅಬ್ದುಲ್ಲ ಮಾತನಾಡಿದರು.

ಅಧ್ಯಕ್ಷತೆಯನ್ನು ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ. ಹೆಚ್.ವಿ. ದೇವದಾಸ್ ವಹಿಸಿದ್ದರು. ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಎನ್. ವೀರ ಭದ್ರಯ್ಯ ಪಾಲ್ಗೊಂಡಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಡಾ. ಅಂಬೇಡ್ಕರ್ ಭವನದಿಂದ ಮುಖ್ಯ ರಸ್ತೆಗಾಗಿ ಕಾವೇರಿ ಕಲಾಕ್ಷೇತ್ರದವರೆಗೆ ಮೆರವಣಿಗೆ ನಡೆಯಿತು.