ವೀರಾಜಪೇಟೆ, ನ. 28: ಇಚ್ಚಾಶಕ್ತಿಯಿಂದ ಕನ್ನಡವನ್ನು ನಮ್ಮ ಮನೆಯಲ್ಲಿ ಬಳಸಿಕೊಂಡರೆ ಕನ್ನಡಕ್ಕೆ ಸಾವಿಲ್ಲ ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಂತ ಮಲ್ಲಿಕಾರ್ಜುನಾ ಸ್ವಾಮೀಜಿ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವೀರಾಜಪೇಟೆ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ 7ನೇ ಕನ್ನಡ ಸಾಹಿತ್ಯ ಸಮ್ಮಳನದಲ್ಲಿ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಸಂಸ್ಕøತಿಗಳು ಗಟ್ಟಿಯಾಗಿ ಉಳಿಯಬೇಕಾದರೆ ತಾಯಂದಿಯರಿಂದ ಮಾತ್ರ ಸಾಧ್ಯ. ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಅಳಿಯಲು ಸಾಧ್ಯವಿಲ್ಲ. ಕನ್ನಡ ಭಾಷೆಯನ್ನು ಬಳಸಿ ಶಾಶ್ವತವಾಗಿ ಉಳಿಸುವದರ ಮೂಲಕ ಭಾಷೆಯ ಬೆಳವಣಿಗೆ ಮುಂದಿನ ತಲೆಮಾರಿಗೆ ಹಸ್ತಾಂತರವಾಗಬೇಕು. ಕನ್ನಡದ ಬಗ್ಗೆ ಮನೋ ದಾರಿದ್ರ್ಯ ಎಲ್ಲಿಯ ತನಕ ಇರುತ್ತದೆ ಅಲ್ಲಿಯವರೆಗೆ ಕನ್ನಡವನ್ನು ಗಟ್ಟಿಗೊಳಿಸಲು ಸಾಧ್ಯವಿಲ್ಲ. ಈಗ ಗ್ರಾಮೀಣ ಪ್ರದೇಶದಿಂದ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ ಹರೀಶ್ ಮಾತನಾಡಿ ಶಿಕ್ಷಣದಲ್ಲಿ ಕನ್ನಡ ಭಾಷೆ ಬಳಕೆಯಾದರೆ ಮಾತ್ರ ಕನ್ನಡವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ ಮಾನವೀಯತೆಗಳನ್ನು ವಿಶಾಲಗೊಳಿಸುವದು ಒಂದು ಭಾಷೆ. ಎಲ್ಲಾ ಸೋದರ ಭಾಷೆಗಳನ್ನು ಒಳಗೊಂಡಿರುವ ಕನ್ನಡ ಭಾಷೆ ನೆಲಕಚ್ಚುತ್ತಿದೆ ಎಂಬ ಭಾವನೆ ಬೇಡ. ಕನ್ನಡ ಭಾಷೆಯನ್ನು ಉಳಿಸಬೇಕಾದರೆ ಅನ್ಯ ಭಾಷಿಕರೊಂದಿಗೆ ಕನ್ನಡವನ್ನು ಬಳಸಬೇಕು. ಮಗುವೆ ಭಾಷೆಯ ತಾಯಿ. ಮಗುವಿನಿಂದಲೇ ಕನ್ನಡ ಭಾಷೆಯನ್ನು ಬಳಕೆಮಾಡಿದರೆ ಕನ್ನಡದ ಉಳಿವಿಗೆ ಅವಕಾಶವಾಗು ತ್ತದೆ. ಭಾಷೆಗಳು ಬೆಸುಗೆಯ ಮೂಲವಾಗಬೇಕೆ ವಿನಹ ವಿಭಜನೆಗೆ ಕಾರಣಿಭೂತವಾಗಬಾರದು ಎಂದು ಹೇಳಿದರು.

ಸಮ್ಮೇಳನದ ಸ್ಮರಣ ಸಂಚಿಕೆ ಹಾಗೂ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ, ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಅವರು ಬರೆದಿರುವ ಪುಸ್ತಕಗಳನ್ನು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಲೋಕೇಶ್ ಸಾಗರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ತಾಲೂಕು ಅಧ್ಯಕ್ಷ ಮುಲ್ಲೆಂಗಡ ಮಧೋಶ್ ಪೂವಯ್ಯ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ವೀರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲಿರ ಚಲನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್, ಉಪಾಧ್ಯಕ್ಷೆ ತಸ್ನೀಂ ಅಕ್ತರ್, ನಿಕಟ ಪೂರ್ವ ಸಮ್ಮೇಳನದ ಅಧ್ಯಕ್ಷ ಡಾ, ಜೆ.ಎ. ಸೋಮಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮನು ಮುತ್ತಪ್ಪ, ಕನ್ನಡ ಸಾಹಿತ್ಯ ಪರಿಷತ್‍ನ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಚಾಲ್ರ್ಸ್ ಡಿಸೋಜಾ ಹಾಗೂ ಸಣ್ಣುವಂಡ ನೀರಜ್ ನೀಲಮ್ಮ ಕಾರ್ಯಕ್ರಮ ನಿರೂಪಿಸಿದರು. ಮಧೋಶ್ ಪೂವಯ್ಯ ಸ್ವಾಗತಿಸಿದರು. ನಂತರ ವಿಚಾರಗೋಷ್ಠಿ, ಕವಿಗೋಷ್ಠಿ ಜರುಗಿದವು.