ಮಡಿಕೇರಿ, ಸೆ. 4: ವಿಘ್ನ ನಿವಾರಕ, ಆದಿಪೂಜಿತ ಮಹಾ ಗಣಪತಿಯನ್ನು ಇಂದು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮಂಜಿನ ನಗರಿ ಮಡಿಕೇರಿಯಲ್ಲಿ 30ಕ್ಕೂ ಅಧಿಕ ಕಡೆಗಳಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಗಣಪತಿಯ ಆರಾಧನೆ ನಡೆಯಲಿದೆ. ಶ್ರೀಮಂಗಲಶ್ರೀ ಗೌರಿ ಗಣೇಶ ಉತ್ಸವ ಸಮಿತಿ ವತಿಯಿಂದ ಶ್ರೀಮಂಗಲ ಬಸ್ ನಿಲ್ದಾಣದಲ್ಲಿ ತಾ. 5 ರಂದು (ಇಂದು) ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಪೂರ್ವಾಹ್ನ 9.30ಕ್ಕೆ ನಡೆಯಲಿದೆ. ಇಂದಿನಿಂದ 13ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆಯೆಂದು ಸಮಿತಿಯ ಪ್ರಮುಖರು ಶ್ರೀಮಂಗಲ ದಲ್ಲಿ ನಡೆದ ಸಭೆಯಲ್ಲಿ ತಿಳಿಸಿದರು.
ಸಮಿತಿಯ ಅಧ್ಯಕ್ಷ ಬಾಚಂಗಡ ದಾದ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಾರಿ ಶ್ರೀಮಂಗಲದಲ್ಲಿ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಉತ್ಸವ ಆಚರಿಸಲು ಸಿದ್ದತೆ ಬಗ್ಗೆ ಚರ್ಚಿಸಿದರು.