ಭಾಗಮಂಡಲ,ನ. 27: ಕಳೆದ 6 ದಿನಗಳಿಂದ ತಾವೂರು ಗ್ರಾಮದ ಸುತ್ತಲಿನಲ್ಲಿ ಒಂಟಿ ಮಹಿಳೆಯರಿರುವ ಮನೆಯ ಬಾಗಿಲು ಬಡಿದು ಭಯವನ್ನುಂಟು ಮಾಡುತ್ತಿರುವ ಘಟನೆ ನಡೆಯುತ್ತಿರುವ ಮಧ್ಯೆ ಇಂದು ತೋಟದ ನಡುವೆ ಅಪರಚಿತ ವ್ಯಕ್ತಿ ಕಾಣಿಸಿಕೊಂಡು ಮತ್ತೆ ಭಯವನ್ನುಂಟು ಮಾಡಿದ್ದಾನೆ.ಗ್ರಾಮಸ್ಥರು ಹಾಗೂ ಪೊಲೀಸರ ಕಣ್ಣು ತಪ್ಪಿಸ, ಒಂಟಿ ಮಹಿಳೆಯರಿರುವ ಮನೆಗಳ ಬಾಗಿಲು ಬಡಿದು ಪೊಲೀಸರಿಗೆ ಹಾಗೂ ಗ್ರಾಮಸ್ಥರಿಗೆ ಚಳ್ಳೆ ಹಣ್ಣು ತಿನ್ನಿಸಿ ಒಂದೆಡೆಯಿಂದ ಇನ್ನೊಂದೆಡೆಗೆ ಪರಾರಿಯಾಗುತ್ತಿದ್ದನು. ಇಂದು ಇಲ್ಲಿನ ಕುದುಕುಳಿ ಸತೀಶ್ ಅವರ ತೋಟದ ಮಧ್ಯೆ ಕಾಣಿಸಿಕೊಂಡು ಮತ್ತೆ ಭಯವನ್ನುಂಟು ಮಾಡಿದ್ದಾನೆ. ಸತೀಶ್ ಅವರು ತೋಟದ ಕೆಳಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು,ಅವರ ಪತ್ನಿ ಮೇಲ್ಭಾಗದಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಇಲ್ಲಿಗೆ ಧಾವಿಸಿದ ಅಪರಿಚಿತ ವ್ಯಕ್ತಿ ಅವರನ್ನು ಹಿಡಿಯಲು ಯತ್ನಿಸುತ್ತಿದ್ದಂತೆ ಕಿರುಚಿಕೊಂಡಾಗ ಸತೀಶ್ ಓಡಿ ಬಂದಿದ್ದು, ಅಪರಿಚಿತ ವ್ಯಕ್ತಿ ತೋಟದ ನಡುವೆ ಓಡಿ ತಪ್ಪಸಿಕೊಂಡಿದ್ದಾನೆ. ಅಪರಿಚಿತ ವ್ಯಕ್ತಿ ಕೇಸರಿ ಪಂಚೆ ಹಾಗೂ ನೀಲಿ ಮತ್ತು ಹಸಿರು ಬಣ್ಣದ ಅಂಗಿ ಧರಿಸಿದ್ದನು ಎನ್ನಲಾಗಿದೆ. ತೋಟದಿಂದ ಶರವೇಗದಲ್ಲಿ ಓಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಕೂಡಕಂಡಿ ಪುಟ್ಟ ಎಂಬವರು ತನ್ನ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿ ಕರಿಕೆ ರಸ್ತೆ ದಾಟುವಾಗ ಅಲ್ಲಿ ಬಸ್‍ಗಾಗಿ ಕಾಯುತ್ತಿದ್ದವರೊಬ್ಬರು ಈ ಅಪರಿಚಿತನನ್ನು ಗಮನಿಸಿದ್ದಾರೆ. ಇದೀಗ ಅಪರಿಚಿತ ವ್ಯಕ್ತಿ ತಣ್ಣಿಮಾನಿ ಗ್ರಾಮದ ಕಡೆಗೆ ತೆರಳಿರಬಹುದೆಂದು ಸಂಶಯಿಸಲಾಗಿದೆ.

ಈ ಸುದ್ದಿ ಗಾಳಿ ಸುದ್ದಿಯಂತೆ ಹಬ್ಬಿ ನೂರಕ್ಕೂ ಅಧಿಕ ಮಂದಿ ಗ್ರಾಮಸ್ಥರು ಕೋವಿ, ದೊಣ್ಣೆಯೊಂದಿಗೆ ಪೊಲೀಸರ ಜೊತೆಗೂಡಿ ಹುಡುಕಾಟ ನಡೆಸಿದ್ದಾರೆ. ಆದರೂ ಅಪರಿಚಿತ ವ್ಯಕ್ತಿಯ ಪತ್ತೆ ಸಾಧ್ಯವಾಗಲಿಲ್ಲ. ಕಳೆದ 6 ದಿನಗಳಿಂದ ಗ್ರಾಮದಲ್ಲಿ ಭಯಭೀತಿಯನ್ನುಂಟು ಮಾಡಿರುವ ಅಪರಿಚಿತ ವ್ಯಕ್ತಿ ಗ್ರಾಮಸ್ಥರು ಹಾಗೂ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದು, ಶೀಘ್ರ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಅಪರಿಚಿತ ವ್ಯಕ್ತಿಯನ್ನು ಪತ್ತೆ ಹಚ್ಚಿ ಗ್ರಾಮದಲ್ಲಿ ನಿರ್ಭೀತಿಯಿಂದ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- ಸುನಿಲ್