ಮಡಿಕೇರಿ, ಜು. 13: ಕೊಡಗು ಮೂಲದವರಾದ ಮಂಗಳೂರಿನ ಐಜಿ ಕಚೇರಿಯಲ್ಲಿ ಡಿವೈಎಸ್ಪಿಯಾಗಿದ್ದ ಮಾದಪಂಡ ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ವ್ಯಕ್ತಗೊಂಡಿರುವ ಸಾರ್ವಜನಿಕರ ಅಸಮಾಧಾನದಂತೆ ತಾ. 14 ರಂದು (ಇಂದು) ಹಿಂದೂಪರ ಸಂಘಟನೆಗಳು ಕೊಡಗು ಜಿಲ್ಲಾ ಬಂದ್ಗೆ ಕರೆ ನೀಡಿವೆ.
ಈ ಬಂದ್ ಕರೆಗೆ ಜಿಲ್ಲೆಯ ಬಹುತೇಕ ಸಂಘ-ಸಂಸ್ಥೆ, ಸಮಾಜಗಳಿಂದ ಬೆಂಬಲ ವ್ಯಕ್ತಗೊಂಡಿವೆ. ಬಂದ್ ಕರೆಗೆ ವ್ಯಾಪಕ ಬೆಂಬಲ ಕೇಳಿ ಬಂದಿದ್ದು, ಸ್ವಯಂ ಪ್ರೇರಿತ ಬಂದ್ ಖಚಿತವಾಗಿದೆ. ಬಂದ್ ಕರೆಯ ಹಿನ್ನೆಲೆಯಲ್ಲಿ ಜಿಲ್ಲೆಯ ದೈನಂದಿನ ಚಟುವಟಿಕೆಯಲ್ಲಿ ಪ್ರಮುಖ ಪಾತ್ರವಹಿಸುವ ಖಾಸಗಿ ಬಸ್ ಸಂಚಾರ, ವಾಣಿಜ್ಯ ವಹಿವಾಟು ನಡೆಸುವ ಚೇಂಬರ್ ಆಫ್ ಕಾಮರ್ಸ್ ಕೂಡ ಬಂದ್ಗೆ ಸ್ಪಂದಿಸುವ ನಿರ್ಧಾರಕ್ಕೆ ಬಂದಿವೆ.
ಖಾಸಗಿ ಬಸ್ ಸಂಚಾರ ಈ ದಿನ ಸ್ಥಗಿತಗೊಳ್ಳಲಿರುವದಾಗಿ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಗೊಂಡಿದ್ದು, ಹತ್ತು ಹಲವು ಸಂಘ ಸಂಸ್ಥೆಗಳು, ವಿವಿಧ ಸಮಾಜಗಳಿಂದಲೂ ಬೆಂಬಲ ವ್ಯಕ್ತಗೊಂಡಿದೆ.
ಬಂದ್ಗೆ ಬೆಂಬಲ
ಶನಿವಾರಸಂತೆ: ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ತಾ. 14 ರಂದು (ಇಂದು) ಕರೆ ನೀಡಿರುವ ಕೊಡಗು ಬಂದ್ಗೆ ಶನಿವಾರಸಂತೆ ಹೋಬಳಿ ಜೆಡಿಎಸ್ ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಬಂದ್ ಹಿನ್ನೆಲ್ಲೆ ಯಾವದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ತಾ. 14 ರಂದು (ಇಂದು) ಪಿ.ಯು.ಸಿ. ಪೂರಕ ಪರೀಕ್ಷೆ ನಿಗದಿಯಂತೆ ನಡೆಯಲಿದೆ. ಜಿಲ್ಲೆಯ ಮೂರು ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಯಾವದೇ ರೀತಿಯ ತೊಂದರೆಯಾಗದಂತೆ ಸಹಕರಿಸಬೇಕಾಗಿ ಜಿಲ್ಲಾಧಿಕಾರಿ ಅವರು ಕೋರಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ, ವಿವಿಧ ಸಂಘಟನೆಗಳು ಬಂದ್ ಕರೆ ನೀಡಿರುವ ಹಿನ್ನೆಲೆ ಪೊಲೀಸ್ ಇಲಾಖೆಯು ಅಗತ್ಯ ಬಂದೋಬಸ್ತ್ ಮಾಡಿಕೊಂಡಿದ್ದು, 1200 ಪೊಲೀಸ್ ಸಿಬ್ಬಂದಿಗಳು, 150 ಪೊಲೀಸ್ ಅಧಿಕಾರಿಗಳು, 25 ಕೆ.ಎಸ್.ಆರ್.ಪಿ ಹಾಗೂ 3 ಗಸ್ತು ವಾಹನಗಳನ್ನು ನಿಯೋಜಿಸಿದೆ. 100 ರಿಂದ 150 ವಾಹನಗಳು ತಪಾಸಣೆ ಮಾಡಲಿವೆ. ಹಾಗೆಯೇ ಅಗತ್ಯವಿರುವೆಡೆ ವೃತ್ತಿಪರ ಛಾಯಾಗ್ರಾಹಕರು ಮತ್ತು ವೀಡಿಯೋ ಗ್ರಾಫರನ್ನು ನಿಯೋಜಿಸಲಾಗಿದೆ ಎಂದರು.
ಬಂದ್ ಕರೆ ನೀಡಿರುವವರ ಜವಾಬ್ದಾರಿ ಹೆಚ್ಚಿನದಾಗಿದ್ದು, ಸಾರ್ವಜನಿಕರ ಆಸ್ತಿ-ಪಾಸ್ತಿ ತೊಂದರೆಯಾಗದಂತೆ ನಡೆದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಇದ್ದರು.