ಮಡಿಕೇರಿ, ಜ.15 :ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ನೇತೃತ್ವದ ರಾಜ್ಯ ಬಿಜೆಪಿ ಬರ ಅಧ್ಯಯನ ತಂಡ ಜ.16 ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ತಿಳಿಸಿದ್ದಾರೆ.ಇಂದು ಬೆಳಿಗ್ಗೆ 11 ಗಂಟೆಗೆ ವೀರಾಜಪೇಟೆ ತಾಲೂಕಿನ ತಿತಿಮತಿಗೆ ಭೇಟಿ ನೀಡುವ ತಂಡ ಮಧ್ಯಾಹ್ನ 12.30 ಕ್ಕೆ ಗೋಣಿಕೊಪ್ಪಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದೆ.

ನಂತರ ಮಾಲ್ದಾರೆ ಹಾಗೂ ಸೋಮವಾರಪೇಟೆ ತಾಲೂಕಿನ ವಿವಿಧೆಡೆ ಬರ ಅಧ್ಯಯನವನ್ನು ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ತಂಡದಲ್ಲಿ ಆರ್.ಅಶೋಕ್, ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ರೈತ ಮೋರ್ಚಾದ ರಾಜ್ಯಾಧ್ಯಕ್ಷ ವಿಜಯ ಶಂಕರ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ಮನುಮುತ್ತಪ್ಪ, ರಾಜ್ಯ ಮತ್ತು ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬರ ಅಧ್ಯಯನ ತಂಡಕ್ಕೆ ರೈತರು ಹಾಗೂ ಬೆಳೆಗಾರರು ಅಹವಾಲನ್ನು ಸಲ್ಲಿಸಬಹುದೆಂದು ಅವರು ತಿಳಿಸಿದ್ದಾರೆ.