*ಗೋಣಿಕೊಪ್ಪಲು, ಸೆ. 8 : ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಯುವಕ ಸಂಘ, ಕೊಡವ ಕೂಟ ದೊಡ್ಡಮಾಡ್ ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ 5 ನೇ ವರ್ಷದ ವಾಲಿಬಾಲ್ ಕ್ರೀಡಾಕೂಟ ತಾ. 9,10, ಹಾಗೂ 11ರಂದು ನಡೆಯಲಿದೆ ಎಂದು ಗೌರವಾಧ್ಯಕ್ಷ ಸಣ್ಣುವಂಡ ರಮೇಶ್ ತಿಳಿಸಿದ್ದಾರೆ.ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ತಾ. 9 ರಂದು (ಇಂದಿನಿಂದ) ಮಾಯಮುಡಿ ಮಾನಿಲ್ ಅಯ್ಯಪ್ಪ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ. ಪಂದ್ಯಾಟ ವನ್ನು ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಉದ್ಘಾಟಿಸಲಿದ್ದಾರೆ.
ದ್ವಜಾರೋಹಣವನ್ನು ಮಾಯಮುಡಿ ಗ್ರಾ.ಪಂ ಸದಸ್ಯ ಕಾಳಪಂಡ ಬಿದ್ದಪ್ಪ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರ ಚೆಪ್ಪುಡಿರ ಪಿ. ಅಯ್ಯಪ್ಪ ಜಿ.ಪಂ ಮಾಜಿ ಸದಸ್ಯ ಮುಕೊಳೆರ ಕುಶಾಲಪ್ಪ, ನಿವೃತ್ತ ಪ್ರಾಶುಂಪಾಲ ಹೆಮ್ಮಚ್ಚಿಮನೆ ಕಮಲಾಕ್ಷಿ, ಕಾಫಿ ಬೆಳೆಗಾರ ಸಣ್ಣುವಂಡ ಕುಶಾಲಪ್ಪ. ಕೊಡಗು ವಾರ್ತೆ ಸಂಪಾದಕ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಜರಿರುತ್ತಾರೆ ಎಂದು ತಿಳಿಸಿದ್ದಾರೆ.
2ನೇ ದಿನದ ಪಂದ್ಯಾಟದಲ್ಲಿ ಬೆಳಗ್ಗೆ 11 ಗಂಟೆಗೆ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ.ಕಾಫಿ ಬೆಳೆಗಾರ ಅಮ್ಮತ್ತೀರ ಕೃಷ್ಣ ಕುಮಾರ್ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಮದ್ಯಾಹ್ನ ಕೈಲ್ ಪೋಲ್ದ್ ಒತ್ತೋರ್ಮೆ ಕೂಟ, ಮದ್ಯಾಹ್ನದ ನಂತರ ಕೊಡವ ವಾಲಗ ಪೈಪೋಟಿ ನಡೆಯಲಿದೆ.
ಕಾರ್ಯಕ್ರಮವನ್ನು ಕಾಫಿ ಬೆಳೆಗಾರ ನಾಮೇರ ನವೀನ್ ಬೆಳ್ಳಿಯಪ್ಪ ಉದ್ಘಾಟಿಸಲಿದ್ದಾರೆ. ನಂತರ 2.30ಕ್ಕೆ ಅಂತಿಮ ಪಂದ್ಯಾಟ ನಡೆಯಲಿದ್ದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ ಮುಂಡ್ಯೋಳಂಡ ನಂಜುಂಡ ಕಾಫಿ ಬೆಳೆಗಾರರಾದ ಕಾಳಪಂಡ ಸುದೀರ್ ಚೊಟ್ಟೆಕೋರಿಯಂಡ ಶ್ರೀನಿವಾಸ್, ಮಾಚಿಮಾಡ ಸತೀಶ್ ಉಪಸ್ಥಿತರಿರು ವರು ಎಂದು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಪ್ರಮುಖರಾದ ಸಣ್ಣುವಂಡ ವಿಜಯ್, ಸಣ್ಣುವಂಡ ಪ್ರದೀಪ್, ಮತ್ತು ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ಹಾಗೂ ಕಾರ್ಯಕ್ರಮದ ಸಂಚಾಲಕ ಅಣ್ಣೀರ ಹರೀಶ್ ಮಾದಪ್ಪ ಉಪಸ್ಥಿತರಿದ್ದರು.