ಮಡಿಕೇರಿ, ಜು. 6: ಇಂಡೊ - ಸ್ವಿಸ್ ಜೊತೆಗೂಡಿ ಜಂಟಿ ಯೋಜನೆಯೊಂದರ ಮೂಲಕ ಕೊಡಗಿನ ಕಾಫಿ ಮತ್ತು ಜೇನಿನ ಕುರಿತು ಸಂಶೋಧನೆ ನಡೆಸುತ್ತಿವೆ. ಸ್ವಿಡ್ಜರ್‍ಲ್ಯಾಂಡ್‍ನಲ್ಲಿ ರೋಬಸ್ಟಾ ಕಾಫಿಯನ್ನು ಸೂರ್ಯನ ಬೆಳಕಿನಡಿಯೆ ಬೆಳೆಯಲಾಗುತ್ತದೆ. ಭಾರತದಲ್ಲಿ ಶೇಕಡಾ 30ರಿಂದ 50ರಷ್ಟು ಭಾಗ ನೆರಳಿನಡಿ ಕಾಫಿ ಬೆಳೆಯಲಾಗುತ್ತದೆ. ಕೊಡಗು ಜಿಲ್ಲೆಯು ದೇಶದ ಕಾಫಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಇಲ್ಲಿನ ಕಾಫಿಯ ಗುಣಮಟ್ಟ ಉತ್ತಮವಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಹಲವೆಡೆ ನೆರಳಿಗೆ ಸಿಲ್ವರ್ ಓಕ್ ಮರ ನೆಡುತ್ತಿದ್ದು, ಇದರಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿರುವದಾಗಿಯೂ ಸಂಶೋಧಕರು ಹೇಳಿದ್ದಾರೆ. ಮಣ್ಣಿನ ಫಲವತ್ತತೆಯ ಕುಸಿತವು ಕಾಫಿಯ ‘ಔಟ್‍ಟರ್ನ್' ಮೇಲೆ ಪರಿಣಾಮ ಬೀರುತ್ತದೆ.

ಕಾಫಿಯೊಂದಿಗೆ ಜೇನು ಕೃಷಿಯನ್ನೂ ಅಧ್ಯಯನ ಮಾಡಿರುವ ಡಾ. ಸ್ಮಿತಾ ಕೃಷ್ಣನ್ ಹಾಗೂ ಚಾರ್ಲೋಟ್ ಪವೇಗ್ ಕಾಫಿಯು ಜೇನು ನೊಣಗಳನ್ನು ಏಕೆ ಆಕರ್ಷಿಸುತ್ತದೆ ಎಂದು ಸಂಶೋಧಿಸಿದ್ದಾರೆ. ಜೇನು ನೊಣಗಳಿರುವ ತೋಟದ ಕಾಫಿ

ಉತ್ಪನ್ನದ ಗುಣಮಟ್ಟ ಹೆಚ್ಚಿದೆ ಎಂದು ಕಂಡುಕೊಂಡಿದ್ದಾರೆ. ಪರಾಗ ಸ್ಪರ್ಶಕ್ಕೆ ಸಹಕರಿಸುವ ಜೇನು ನೊಣಗಳು ಕಾಫಿಯ ಹೆಚ್ಚಿನ ಉತ್ಪಾದನೆಗೆ ಸಹಕಾರಿಯಾಗಿವೆ. ಹಾಗಾಗಿ ಪ್ರತಿ ಕಾಫಿ ತೋಟದೊಂದಿಗೆ ಜೇನು ಪೆಟ್ಟಿಗೆಗಳನ್ನು ಇರಿಸುವದರಿಂದ ಉತ್ತಮ ಕಾಫಿಯೊಂದಿಗೆ ಜೇನಿನ ಉತ್ಪಾದನೆಯೂ ಸಾಧ್ಯ ಎಂದು ಸಂಶೋಧಕರು ಹೇಳಿದ್ದಾರೆ.

ಜೂನ್ ಹದಿನಾಲ್ಕರಂದು ಅಂಬಟ್ಟಿ ಗ್ರೀನ್ಸ್‍ನಲ್ಲಿ ಇಂಡೊ- ಸ್ವಿಸ್ ಸಂಶೋಧಕರ ಸಮ್ಮೇಳನ ನಡೆದಿದ್ದು, ಜಿಲ್ಲೆಯ ನೂರಕ್ಕೂ ಹೆಚ್ಚು ಕೃಷಿಕರು ಭಾಗವಹಿಸಿದ್ದರು ಎಂದು ಪೊನ್ನಂಪೇಟೆ ಫಾರೆಸ್ಟ್ರಿ ಕಾಲೇಜಿನ ಪ್ರಾಂಶುಪಾಲ ಡಾ. ಚೆಪ್ಪುಡೀರ ಕುಶಾಲಪ್ಪ ಹೇಳಿದ್ದಾರೆ. ಕೃಷಿ ವಿಜ್ಞಾನದೊಂದಿಗೆ ವ್ಯಾಪಾರವೂ ಎರಡೂ ದೇಶಗಳ ನಡುವೆ ವೃದ್ಧಿಯಾಗಲಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.