ಕುಶಾಲನಗರ, ಸೆ. 8: ಕುಶಾಲನಗರ ಸರಕಾರಿ ಆಸ್ಪತ್ರೆಯ ಹೆರಿಗೆ ಕೊಠಡಿಗೆ ನುಗ್ಗಿದ ಬೀದಿ ನಾಯಿಗಳು ಮಗುವಿನ ಭ್ರೂಣವೊಂದನ್ನು ಕಚ್ಚಿಕೊಂಡು ಹೋಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಕುಶಾಲನಗರ ಸಮೀಪದ ಗುಡ್ಡೇನಹಳ್ಳಿ ಗ್ರಾಮದ ನಾಸಿರ್ ಎಂಬವರ ಪತ್ನಿ ಹಸೀನ ಬುಧವಾರ ಸಂಜೆ ಚಿಕಿತ್ಸೆಗೆ ಆಗಮಿಸಿದ ಸಂದರ್ಭ ವೈದ್ಯರು ಪರೀಕ್ಷಿಸಿ ಗರ್ಭಕೋಶ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಗರ್ಭಪಾತ ನಡೆಸಲಾಗಿದೆ. 5 ತಿಂಗಳ ಭ್ರೂಣವನ್ನು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿರಿಸಲಾಗಿತ್ತು. ರಾತ್ರಿ 9.30 ರ ನಂತರ ಈ ಘಟನೆ ಸಂಭವಿಸಿದ್ದು ಭ್ರೂಣವನ್ನು ತಾವು ದಫನ ಮಾಡಲು ನೀಡುವಂತೆ ಮಹಿಳೆಯ ಪತಿ ನಾಸಿರ್ ಮನವಿ ಮಾಡಿದ್ದರು. ನಾಸಿರ್ ಮಸೀದಿಗೆ ತೆರಳಿ ಹಿಂತಿರುಗುವ ಸಂದರ್ಭ ಭ್ರೂಣ ನಾಪತ್ತೆಯಾಗಿರುವ ದಾಗಿ ಕರ್ತವ್ಯದಲ್ಲಿದ್ದ ರೇವತಿ ಎಂಬ ದಾದಿ ಕುಟುಂಬ ಸದಸ್ಯರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಗೊಂದಲಕ್ಕೆ ಈಡಾಗುವ ಪರಿಸ್ಥಿತಿ ಉಂಟಾಯಿತು.ನಂತರ ಮಾತಿನ ಚಕಮಕಿ ನಡೆದು ಆಸ್ಪತ್ರೆಯಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ರಾತ್ರಿ 10.26 ರ ವೇಳೆಯಲ್ಲಿ ಎರಡು ಬೀದಿ ನಾಯಿಗಳು ಆಪರೇಷನ್ ಥಿಯೇಟರ್ಗೆ ನುಗ್ಗಿ ಮಗುವಿನ ಭ್ರೂಣವನ್ನು ಕಚ್ಚಿಕೊಂಡು ಹೋಗುತ್ತಿರುವ ದೃಶ್ಯ ಗೋಚರಿಸಿದೆ. ಜೊತೆಗೆ ಕರ್ತವ್ಯದಲ್ಲಿದ್ದ ದಾದಿ ರೇವತಿ ಅವರ ಹಿಂದುಗಡೆ ನಾಯಿಗಳು ಓಡಾಡುತ್ತಿದ್ದ ದೃಶ್ಯವೂ ಕಂಡುಬಂದಿದೆ. ಆಸ್ಪತ್ರೆಯಲ್ಲಿ ಭದ್ರತೆಯ ಕೊರತೆ ಇರುವ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ನಡೆದಿವೆ ಎಂದು ಕರ್ತವ್ಯದಲ್ಲಿದ್ದ ದಾದಿ ರೇವತಿ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಜಿಲ್ಲಾ ಆರೋಗ್ಯಾಧಿ ಕಾರಿಗಳ ಗಮನಕ್ಕೂ ತರಲಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ಓ.ಆರ್. ಶ್ರೀರಂಗಪ್ಪ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಹಾಗೂ ಕರ್ತವ್ಯದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಮಾಹಿತಿ ಪಡೆದರು. ಹಾಗೂ ಕರ್ತವ್ಯದಲ್ಲಿದ್ದ ವೈದ್ಯರು ಹಾಗೂ ದಾದಿಯರನ್ನು ವಿಚಾರಣೆಗೆ ಒಳಪಡಿಸಿದ್ದು ಮುಂದಿನ ಕ್ರಮಕೈಗೊಳ್ಳುವದಾಗಿ ತಿಳಿಸಿದ್ದಾರೆ. ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಈ ರೀತಿಯ ಘಟನೆಗಳು ಕೆಲವು ಬಾರಿ ನಡೆದಿದ್ದು ಈ ಹಿಂದೆ ಬೀದಿ ನಾಯಿಯೊಂದು ಪಟ್ಟಣದಲ್ಲಿ ಮಗುವಿನ ಭ್ರೂಣವೊಂದನ್ನು ಕಚ್ಚಿಕೊಂಡು ಹೋಗುತ್ತಿದ್ದ ಘಟನೆ ಪತ್ರಿಕೆಯಲ್ಲಿ ವರದಿಯಾಗಿದ್ದನ್ನು ಸ್ಮರಿಸಬಹುದು. ಬೀದಿ ನಾಯಿಗಳು ಸರಕಾರಿ ಆಸ್ಪತ್ರೆಯ ಹೆರಿಗೆ ಕೊಠಡಿಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದ ದೃಶ್ಯ ಕಂಡು ಸ್ಥಳೀಯ ಜನ ಆತಂಕಕ್ಕೆ ಒಳಗಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ತೆರಳಿದ ಸುದ್ದಿಗಾರರೊಂದಿಗೆ ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡುಬಂದಿತು.