ಸೋಮವಾರಪೇಟೆ, ಅ. 9: ಆಸ್ತಿ ವೈಷಮ್ಯಕ್ಕೆ ವ್ಯಕ್ತಿಯೋರ್ವರ ಮೇಲೆ ಕೊಲೆಯತ್ನ ನಡೆದಿರುವ ಘಟನೆ ತಾಲೂಕಿನ ಇಗ್ಗೋಡ್ಲು ಗ್ರಾಮದಲ್ಲಿ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಗ್ಗೋಡ್ಲು ಗ್ರಾಮ ನಿವಾಸಿ ಪೂವಯ್ಯ ಅವರು ತಮ್ಮ ಗದ್ದೆಯಲ್ಲಿ ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿದ್ದ ಸಂದರ್ಭ ಸ್ಥಳಕ್ಕಾಗಮಿಸಿದ ಸಹೋದರ ಕುಶಾಲಪ್ಪ ಅವರು ಆಸ್ತಿ ವಿಚಾರದಲ್ಲಿ ತಗಾದೆ ತೆಗೆದು ಮೊದಲು ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ನಂತರ ಕೋವಿಯಿಂದ ಗುಂಡು ಹಾರಿಸಿದ್ದು ತಾನು ಅಪಾಯದಿಂದ ಪಾರಾಗಿದ್ದೇನೆ ಎಂದು ಪೂವಯ್ಯ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಕುಶಾಲಪ್ಪ ಅವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.