ವೀರಾಜಪೇಟೆ, ಡಿ.19 : ವೀರಾಜಪೇಟೆಗೆ ಸಮೀಪದ ಚೋಕಂಡಳ್ಳಿ ಗ್ರಾಮದ ಎನ್. ಸುನಿಲ್ ಪೂಣಚ್ಚ ಎಂಬಾತನಿಗೆ ರಾಜ ತಮ್ಮಯ್ಯ ಹೊಟ್ಟೆಯ ಭಾಗಕ್ಕೆ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.
ಗಾಯಗೊಂಡಿರುವ ಸುನಿಲ್ ಹುತ್ತರಿ ಹಬ್ಬಕ್ಕಾಗಿ ಮನೆಗೆ ಬಂದಿದ್ದ ನಲ್ವತ್ತೊಕ್ಕಲು ಗ್ರಾಮದ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಹುತ್ತರಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ನೃತ್ಯದಲ್ಲಿ ತಲ್ಲೀನನಾಗಿದ್ದ ಸುನಿಲ್ಗೆ ಆಸ್ತಿ ವಿವಾದದ ವಿಷಯದಲ್ಲಿ ವೈಷಮ್ಯ ಸಾಧಿಸುವ ಸಲುವಾಗಿ ಹೊಟ್ಟೆಗೆ ಚೂರಿಯಿಂದ ಇರಿಯಲಾಗಿದೆ ಎಂದು ಗ್ರಾಮಾಂತರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಚೋಕಂಡಳ್ಳಿ ಗ್ರಾಮದ ಸುನಿಲ್ನ ದೊಡ್ಡಪ್ಪನಾದ ಎನ್.ರಾಜ ತಮ್ಮಯ್ಯ ಹಾಗೂ ಸುನಿಲ್ ಕುಟುಂಬಗಳ ನಡುವೆ ಆಸ್ತಿ ವಿವಾದವಿತ್ತು. ಚೂರಿ ಇರಿದ ನಂತರ ರಾಜ ತಮ್ಮಯ್ಯ ತಲೆ ಮರೆಸಿಕೊಂಡಿರುವದಾಗಿ ಪೊಲೀಸರು ತಿಳಿಸಿದ್ದಾರೆ.