ಮಡಿಕೇರಿ, ಸೆ. 14: ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘದ ಮೇಲಿರುವ ಸಾಲವನ್ನು ಸಂಘಕ್ಕೆ ಸೇರಿದ ಹುಣಸೂರು ವಿನಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿ ತೀರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಸಂಘದ ಮೇಲಿನ ಸಾಲ, ಸಾಲ ಬಾಕಿ, ಸರಕಾರದಿಂದ ಪಡೆದ ಸಾಲ ಸೇರಿದಂತೆ ರೂ. 16 ಕೋಟಿಯಷ್ಟು ಹೊರೆ ಇದೆ. ಸಂಘದ ಆಸ್ತಿ ಮಾರಾಟ ಮಾಡಿದರೆ, ಇದನ್ನು ಸರಿದೂಗಿಸಬಹುದೆಂದು ಸಂಘದ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್. ವಿಜಯಕುಮಾರ್ ಹೇಳಿದರು. ಈಗಾಗಲೇ ಸಂಘದ ಜಾಗ ಡಿಸಿಸಿ ಬ್ಯಾಂಕ್ನಲ್ಲಿ ಅಡಮಾನವಾಗಿದೆ. ರಕ್ಷಿಸುವ ಸಲುವಾಗಿ ಆಸ್ತಿ ಮಾರಾಟ ಮಾಡಲು ಸರಕಾರದಿಂದ ಅನುಮತಿ ಪಡೆದುಕೊಳ್ಳಲಾಗಿದೆ. ಸರಕಾರಿ ದರದಂತೆ ರೂ. 11.73 ಕೋಟಿ ಬೆಲೆ ಬಾಳಲಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭ ಸದಸ್ಯರುಗಳು ಆಸ್ತಿಯನ್ನು ಉಳಿಸಿಕೊಂಡು ಸರಕಾರಕ್ಕೆ ಮನವಿ ಮಾಡಿ ಸಾಲ ಪಡೆದುಕೊಳ್ಳುವ ಸಲಹೆ ನೀಡಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ವ್ಯವಸ್ಥಾಪಕ ನಿರ್ದೇಶಕರು ಈಗಾಗಲೇ ಸರಕಾರದ ಸಾಲ ರೂ. 3.50 ಕೋಟಿ ಬಾಕಿ ಇದೆ. ಇನ್ನೂ ಸರಕಾರÀದಿಂದ ಸಾಲ ಸಿಗುವದಿಲ್ಲವೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಎಂ.ಬಿ. ದೇವಯ್ಯ ಅವರುಗಳು ಹುಣಸೂರಿನಲ್ಲಿ ಸಂಘದ ಹೆಸರಿನಲ್ಲಿ 35 ಎಕರೆಯಷ್ಟು ಜಾಗವಿತ್ತು. ಅದರಲ್ಲಿ 5 ಎಕರೆ ತಾಲೂಕು ಕಚೇರಿಗೆ ಬಿಟ್ಟುಕೊಡಲಾಗಿದೆ. ಇದೀಗ 30 ಎಕರೆಯಷ್ಟು ಜಾಗವಿದೆ. ಪೆಟ್ರೊಲ್ ಬಂಕ್ಗೆ ಒಂದು ಎಕರೆ ಜಾಗ ಕಾಯ್ದಿರಿಸಿ ಉಳಿದ ಜಾಗವನ್ನು ಮಾರಾಟ ಮಾಡಬೇಕಿದೆ. ಯಾವದೇ ಕಾರಣಕ್ಕೂ ರೂ. 12 ಕೋಟಿ ಕಡಿಮೆ ಮೊತ್ತಕ್ಕೆ ಬಿಟ್ಟುಕೊಡುವದಿಲ್ಲ. ಸಾಧ್ಯವಾದರೆ ಸಂಘದ ಸದಸ್ಯರುಗಳೇ ಅನುಕೂಲ ಇರುವವರು ಪಾಲುದಾರರಾಗಿ ಜಾಗ ಖರೀದಿಸಿದರೆ ನಮ್ಮಲ್ಲೇ ಜಾಗ ಉಳಿಯಲಿದೆ ಇದಕ್ಕೂ ಅವಕಾಶ ಕಲ್ಪಿಸಲಾಗುವದೆಂದು ಹೇಳಿದರು.
ಈ ಸಂದರ್ಭದಲ್ಲಿ ಸದಸ್ಯರುಗಳು ಜಾಗವನ್ನು ನಿವೇಶನಗಳಾಗಿ ಪರಿವರ್ತನೆ ಮಾಡಿ ಮಾರಾಟ ಮಾಡಿದರೆ ಇನ್ನೂ ಅಧಿಕ ಲಾಭ ಬರುತ್ತದಲ್ಲವೇ ಎಂಬ ಸಲಹೆ ನೀಡಿದರು. ಈ ಬಗ್ಗೆ ಪ್ರಯತ್ನಿಸುವ ಬಗ್ಗೆ ಅಧ್ಯಕ್ಷರು ಹೇಳಿದರು.
ನಿಗದಿತ ಮೊತ್ತಕ್ಕಿಂತ ಹೆಚ್ಚಿಗೆ ಹಣ ವಾಹನ, ಡೀಸೆಲ್ಗೆ ವೆಚ್ಚವಾಗಿರುವ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತಗೊಂಡಿತು. ಮರಣ ನಿಧಿ ಠೇವಣಿ ಬಗ್ಗೆಯೂ ಚರ್ಚೆ ನಡೆದ ಸಂದರ್ಭದಲ್ಲಿ ಅಧ್ಯಕ್ಷರು ಮರಣ ನಿಧಿಯಲ್ಲಿದ್ದ ಹಣವನ್ನು ಈ ಹಿಂದಿನ ಸಾಲ ಮರುಪಾವತಿ ಮಾಡಲು ಹೊಂದಾಣಿಕೆ ಮಾಡಲಾಗಿದೆ. ಆದರೂ ಮೃತಪಟ್ಟ ಸದಸ್ಯರುಗಳಿಗೆ ಇತರ ಮೂಲಗಳಿಂದ ಸರಿದೂಗಿಸಿ ಮರಣ ನಿಧಿ ನೀಡಲಾಗುತ್ತಿದೆ ಎಂದು ಸಮಜಾಯಿಷಿಕೆ ನೀಡಿದರು.
ಸಭೆಯಲ್ಲಿ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳು, ನಿರ್ದೇಶಕರುಗಳು ಹಾಜರಿದ್ದರು.