ವೀರಾಜಪೇಟೆ, ಜ. 5: ಆಸ್ತಿ ಲಪಟಾಯಿಸುವ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳು ಸಿಬ್ಬಂದಿಗಳನ್ನು ಬಳಸಿಕೊಂಡು ನಕಲಿ ದಾಖಲೆ ಸೃಷ್ಠಿಸಿ ತನ್ನ ಆಸ್ತಿಯನ್ನು ಕಬಳಿಸುವ ಹುನ್ನಾರ ನಡೆಸಲಾಗಿದೆ ಎಂದು ಬಾಳೆಲೆ ಗ್ರಾಮದ ಆನಂದ್ ಜಿ. ರಾವ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಾಳೆಲೆ ಗ್ರಾಮದ ಸರ್ವೆ ಸಂಖ್ಯೆ 232, 187/1, 187/2,187/3, 187/4 ಹಾಗೂ 233 ರಲ್ಲಿ 23.93 ಏಕ್ರೆ ಜಾಗವು ನನ್ನ ಸ್ವಂತ ಆಸ್ತಿಯಾಗಿದೆ. 30 ವರ್ಷಗಳಿಂದ ತಾನು ಅಮೇರಿಕದಲ್ಲಿ ವಾಸವಿದ್ದು, ಪ್ರತಿವರ್ಷ ಕೊಡಗಿಗೆ ಬಂದು ಹೋಗುತ್ತಿದ್ದೇನೆ. ತನ್ನ ಸಹೋದರ ಅನಿಲ್ ರಾವ್ ಆಸ್ತಿಯ ಜವಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು. 8.6.15 ರಂದು ಬಾಳೆಲೆ ಗ್ರಾಮದ ಬಿ.ಎನ್. ನಾಗರಾಜ್, ಬಿ.ಎನ್. ರಾಘವೇಂದ್ರ, ಬದ್ರಿ ನಾರಾಯಣ್, ವತ್ಸಲಾ ನಾರಾಯಣ್, ಪ್ರದೀಪ್ ಜಾಗೀರ್ದಾರ್, ಕಮಲ, ಪುಟ್ಟಮ್ಮ, ವಾಣಿ, ಲೀಲಾ, ಸುಮಿತ್ರ, ನರಸಿಂಹ ಮೂರ್ತಿ, ರಾಜಶೇಖರ್, ರಮೇಶ್ ಅವರುಗಳು ಸ್ವಾಧೀನಾನುಭವದಲ್ಲಿರುವ ತನ್ನ ಆಸ್ತಿಗೆ ಅಡ್ಡಿಪಡಿಸಿದ್ದರಿಂದ ವೀರಾಜಪೇಟೆ ಸಿವಿಲ್ ನ್ಯಾಯಾಲಯ ದಲ್ಲಿ 148/15ರಂತೆ ನಿರ್ಬಂದಾ ಕಾಜ್ಞೆಯನ್ನು ನೀಡಲಾಗಿದೆ.
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಬದ್ರಿ ನಾರಾಯಣ್, ವತ್ಸಲ ನಾರಾಯಣ್ ಹಾಗೂ ಪ್ರದೀಪ್ ಕಂದಾಯ ಇಲಾಖಾಧಿ ಕಾರಿಗಳ ಶಾಮೀಲಿನೊಂದಿಗೆ ಆನಂದ ರಾವ್, ಅನಿಲ್ ರಾವ್ ಹಾಗೂ ಗೋಪಾಲ್ ರಾವ್ ಅವರ ನಕಲಿ ಸಹಿ ಬಳಸಿ ತಮ್ಮ ಹೆಸರಿಗೆ ದಾಖಲೆ ಗಳನ್ನು ಸೃಷ್ಠಿಮಾಡಿ ಕೊಂಡಿರುವ ವಿಚಾರ ತಿಳಿದು ಬಂದಾಗ ಇವರ ವಿರುದ್ಧ ಪೊನ್ನಂಪೇಟೆ ನ್ಯಾಯಾಲಯ ದಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ. ತಮ್ಮ ಆಸ್ತಿಗೆ ಸಂಬಂಧಪಟ್ಟಂತೆ 15.4.2006 ರಂದು ಆಸ್ತಿಯ ಮೂಲ ದಾಖಲೆ ಬಗ್ಗೆ ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಎಂ.ಸಿ. ಪ್ರತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸಿದಾಗ ರೆವಿನ್ಯೂ ಅಧಿಕಾರಿಗಳೂ ಅದನ್ನು ಕೊಡಲು ನಿರಾಕರಿಸಿದ್ದಾರೆ. ಭೂಮಿ ಡಾಟ್ ಕಾಮ್ ವೆಬ್ಸೈಟ್ನಲ್ಲಿ ನೋಡಿದಾಗ ತಮ್ಮ ಹೆಸರಿನಲ್ಲಿಯೇ ಆಸ್ತಿ ಇರುವ ದಾಖಲೆ ಪ್ರತಿ ಲಭ್ಯವಾಗಿದೆ. ಈ ಎಂ.ಸಿ. ಪ್ರತಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು. ಜಿಲ್ಲಾಧಿಕಾರಿಗಳು ನಕಲಿ ದಾಖಲೆ ಸೃಷ್ಠಿಸಿದ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ವಂಚನೆ ಗೊಳಗಾದ ಅನಿಲ್ ರಾವ್ ಆಗ್ರಹಿಸಿದರು. ಗೋಷ್ಠಿಯಲ್ಲಿ ಅನಿಲ್ ರಾವ್, ವಕೀಲ ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.