ಮಡಿಕೇರಿ, ಜೂ. 11: ಜಿಲ್ಲೆಯ ಸಮಗ್ರ ಗಿರಿಜನ ಇಲಾಖೆ ವ್ಯಾಪ್ತಿಗೆ ಒಳಪಡುವ 11 ಆಶ್ರಮ ಶಾಲೆಯ ಒಂದರಿಂದ ಮೂರನೇ ತರಗತಿ ವಿದ್ಯಾರ್ಥಿಗಳಿಗೆ ನಲಿ-ಕಲಿ ಹಾಗೂ ಕಾರ್ಟೂನ್ ಮಾದರಿಯಲ್ಲಿ ಮಾರ್ಗದರ್ಶಿ ಶಿಕ್ಷಣ ನೀಡಲು ಸಿದ್ಧತೆಗಳು ನಡೆದಿದ್ದು, ಈ ತಿಂಗಳ ಅಂತ್ಯದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಜಿ.ಪಂ. ಸಿಇಓ ಚಾರುಲತಾ ಸೋಮಲ್ ತಿಳಿಸಿದ್ದಾರೆ.

ನಗರದ ಕೋಟೆಯಲ್ಲಿರುವ ತಮ್ಮ ಕಚೇರಿಯಲ್ಲಿ ಈ ಸಂಬಂಧ ಮಾಹಿತಿ ನೀಡಿದ ಅವರು ಆಶ್ರಮ ಶಾಲೆಗಳಲ್ಲಿನ ಮಕ್ಕಳು ಶಿಕ್ಷಣದಲ್ಲಿ ಬಹಳ ಹಿಂದೆ ಉಳಿದಿದ್ದು, ಈ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತಾಗಲು ಚಿಂತನೆ ಮಾಡಲಾಗಿದ್ದು, ಆ ನಿಟ್ಟಿನಲ್ಲಿ ಕಾರ್ಟೂನ್ ಮಾದರಿಯಲ್ಲಿ ಸಾಮಾನ್ಯ ಶಿಕ್ಷಣ, ಸಾಮಾನ್ಯ ಜ್ಞಾನ, ಗಣಿತ, ಆರೋಗ್ಯ, ಶುಚಿತ್ವ, ಮತ್ತಿತರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಈಗಾಗಲೇ ಜಿಲ್ಲೆಯಲ್ಲಿ ಐಟಿಡಿಪಿ ಇಲಾಖೆ ವ್ಯಾಪ್ತಿಯ 11 ಆಶ್ರಮ ಶಾಲೆಗಳಿದ್ದು, ವೀರಾಜಪೇಟೆ ತಾಲೂಕಿನ ಗೋಣಿಗದ್ದೆ, ಮರೂರು, ತಿತಿಮತಿ, ಸಿ.ಬಿ.ಹಳ್ಳ, ಕೋತೂರು, ಬೊಮ್ಮಾಡು, ನಾಗರಹೊಳೆ, ನಿಟ್ಟೂರು, ಸೋಮವಾರಪೇಟೆ ತಾಲೂಕಿನ ಬಸವನಹಳ್ಳಿ, ಯಡವನಾಡು, ಮಾಲಂಬಿ, ಮಡಿಕೇರಿ ತಾಲೂಕಿನ ಕರಿಕೆ, ಕಟ್ಟೆಪಳ್ಳ ಈ ಆಶ್ರಮ ಶಾಲೆಗಳಲ್ಲಿನ ಒಂದರಿಂದ ಮೂರನೇ ತರಗತಿ ವಿದ್ಯಾರ್ಥಿಗಳಿಗೆ ಕಾರ್ಟೂನ್ ಮಾದರಿಯಲ್ಲಿ (ವ್ಯಂಗ್ಯ ಚಿತ್ರಗಳ) ಮಾಹಿತಿ ಶಿಕ್ಷಣ ನೀಡಲಾಗುತ್ತದೆ ಎಂದು ಹೇಳಿದರು.

ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ತಳಪಾಯವಾಗಿದ್ದು, ಗುಣಮಟ್ಟದ ಶಿಕ್ಷಣ ನೀಡಿದ್ದಲ್ಲಿ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ. ಹಾಗೆಯೇ ಆಶ್ರಮ ಶಾಲೆ ಮಕ್ಕಳಿಗೆ ನಲಿ-ಕಲಿ ಇಲ್ಲದಿರುವದರಿಂದ, ನಲಿ-ಕಲಿ ಆರಂಭಿಸಲು ಸಂಬಂಧಪಟ್ಟ ನಿರ್ದೇಶಕರ ಜೊತೆ ಮಾತನಾಡಲಾಗಿದ್ದು, ನಲಿ-ಕಲಿ ಶಿಕ್ಷಣವನ್ನು ಆರಂಭಿಸಲಾಗುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರಲ್ಲಿ ಹೆಚ್ಚಿನ ಆಸಕ್ತಿ ಅಗತ್ಯ. ಆ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದರು.

ಈಗಾಗಲೇ ಮೂಲ ನಿವಾಸಿ ಗಿರಿಜನ ಮಕ್ಕಳಿಗೆ ಬೇಸಿಗೆ ಶಿಬಿರ, ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ಟೈ, ಬೆಲ್ಟ್, ಸೋಲಾರ್ ಹೀಟರ್ ವ್ಯವಸ್ಥೆ ಒದಗಿಸಲಾಗಿದೆ. ಹಾಗೆಯೇ ಐಟಿಡಿಪಿ ಇಲಾಖೆ ಹಾಸ್ಟೆಲ್‍ಗಳಲ್ಲಿ ಶಿಕ್ಷಕರಿಗೆ ತರಬೇತಿ ಇನ್‍ಫೋಸಿಸ್ ಮೂಲಕ ಉಚಿತವಾಗಿ ಕಂಪ್ಯೂಟರ್ ಪಡೆಯಲು ಮಾತುಕತೆ ನಡೆದಿದೆ ಎಂದು ತಿಳಿಸಿದರು. ಐಟಿಡಿಪಿ ಇಲಾಖಾ ಅಧಿಕಾರಿ ಸತೀಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಗಳಾದ ಚಂದ್ರಶೇಖರ್, ಆಶ್ರಮ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತಿತರರು ಸಭೆಯಲ್ಲಿ ಹಾಜರಿದ್ದರು.