ಮಡಿಕೇರಿ, ಜ. 31: ಕೇಂದ್ರ ಸರ್ಕಾರ ರೂ. 500 ಮತ್ತು ರೂ. 1000 ಮುಖಬೆಲೆಯ ನೋಟು ಗಳನ್ನು ನಿಷೇಧಿಸಿರುವದರಿಂದ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ತಲೆದೋರಿದೆ ಎಂದು ಆರೋಪಿಸಿ ಎಸ್‍ಡಿಪಿಐ ವತಿಯಿಂದ ನಗರದಲ್ಲಿ ಕರಾಳ ದಿನ ಆಚರಿಸಲಾಯಿತು.
ನ. 8 ರಂದು ಯಾವದೇ ಮುನ್ಸೂಚನೆ ನೀಡದೆ, ಪ್ರಧಾನಿ ನರೇಂದ್ರ ಮೋದಿ ಅವರು ನೋಟುಗಳನ್ನು ಅಮಾನ್ಯೀಕರಣ ಮಾಡಿದ್ದಾರೆ. ಕೇಂದ್ರ ಸರ್ಕಾರವು ದೇಶದ ನಾಗರಿಕರ ಮೂಲಭೂತ ಹಕ್ಕಿನ ಮೇಲೆ ಪ್ರಹಾರ ನಡೆಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಹೇರಿದಂತಾಗಿದೆ ಎಂದು ಆರೋಪಿಸಿ ಎಸ್‍ಡಿಪಿಐ ನಗರದ ಸುದರ್ಶನ ವೃತ್ತದಿಂದ ಗಾಂಧಿ ಮೈದಾನದವರೆಗೆ ಕರಾಳ ದಿನದ ಅಂಗವಾಗಿ ಕಪ್ಪು ಬಾವುಟ ಹಿಡಿದು ಮೆರವಣಿಗೆಯಲ್ಲಿ ತೆರಳಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನ. 8 ರಂದು ಏಕಾಏಕಿ ಸಚಿವ ಸಂಪುಟ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸದೆ ನೋಟು ನಿಷೇಧ ಮಾಡಿದ್ದಾರೆ. ಇದರಿಂದ ದೇಶದಲ್ಲಿ ಆರ್ಥಿಕ ತುರ್ತುಪರಿಸ್ಥಿತಿ ಹೇರಿದಂತಾಗಿದ್ದು, ಜನ ಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ. ಕಪ್ಪು ಹಣ ಭಯೋತ್ಪಾದನೆಯನ್ನು ನಿಯಂತ್ರಣ ಗೊಳಿಸುವ ಉದ್ದೇಶ ದಿಂದ ನೋಟು ನಿಷೇಧ ಮಾಡ ಲಾಗಿದೆ ಎಂದು ಪ್ರಧಾನಿ ಹೇಳುತ್ತಿ ದ್ದರೂ, ನಿಯಂತ್ರಣ ಸಾಧ್ಯವಾಗಿಲ್ಲ. ಜನಜೀವನ, ವ್ಯಾಪಾರವಹಿವಾಟು ಗಳನ್ನು ಅಸ್ತವ್ಯಸ್ತಗೊಳಿಸಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭ ಸಿಪಿಐಎಂಎಲ್ ಮುಖಂಡ ಟಿ.ಎಸ್. ನಿರ್ವಾಣಪ್ಪ, ದಲಿತ ಸಂಘರ್ಷ ಸಮಿತಿಯ ಹೆಚ್.ಎಲ್. ದಿವಾಕರ್, ಎಸ್‍ಡಿಪಿಐ ಜಿಲ್ಲಾ ಉಪಾಧ್ಯಕ್ಷ ಲಿಯಾಕತ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ನಗರಸಭಾ ಸದಸ್ಯರಾದ ಮನ್ಸೂರ್, ಕೆ.ಜೆ. ಪೀಟರ್ ಹಾಗೂ ಇನ್ನಿತರರು ಇದ್ದರು.