ಮಡಿಕೇರಿ, ನ.20 : ಐಗೂರು ಗ್ರಾಮದ ಸಂಘ ಪರಿವಾರದ ಕಾರ್ಯಕರ್ತ ಕೆ.ಎಸ್.ಪದ್ಮನಾಭ ಅವರ ಕಾರಿಗೆ ಬೆಂಕಿ ಹಚ್ಚಿದ ಆರೋಪಿ ಗಳನ್ನು ಮುಂದಿನ ಏಳು ದಿನಗಳ ಒಳಗಾಗಿ ಬಂಧಿಸದಿದ್ದಲ್ಲಿ ಜಿಲ್ಲಾ ವ್ಯಾಪಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವದಾಗಿ ಜಿಲ್ಲಾ ಬಿಜೆಪಿ ಮಲಯಾಳಿ ಸೆಲ್ ಎಚ್ಚರಿಕೆ ನೀಡಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೆಲ್‍ನ ಜಿಲ್ಲಾ ಸಂಚಾಲಕ ಹಾಗೂ ನಗರಸಭಾ ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಬೇಕೆಂದು ಒತ್ತಾಯಿಸಿದರು. ಪ್ರಕರಣ ನಡೆದು ಅನೇಕ ದಿನಗಳೇ ಕಳೆದಿದ್ದರೂ ಆರೋಪಿಗಳನ್ನು ಬಂಧಿಸದೆ ಇರುವದಕ್ಕೆ ರಾಜ್ಯ ಸರಕಾರದ ಹುನ್ನಾರವೇ ಕಾರಣವೆಂದು ಆರೋಪಿಸಿದರು.
ಪ್ರಭು ಎಂಬವರಿಗೆ ಕೊಲೆ ಬೆದರಿಕೆವೊಡ್ಡಲಾಗಿದ್ದು, ಸೂಕ್ತ ರಕ್ಷಣೆಯ ಅಗತ್ಯವಿದೆ. ಇಂತಹ ಪ್ರಕರಣಗಳ ಮೂಲಕ ಕೆಲವು ಕಿಡಿಗೇಡಿಗಳು ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿವೆಯೇ ಹೊರತು ಬಿಜೆಪಿ ಎಂದಿಗೂ ಗಲಭೆ ನಡೆಸಿಲ್ಲ ವೆಂದು ಸಮರ್ಥಿಸಿ ಕೊಂಡರು. ಕಾರಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ವಿಶೇಷ ತಂಡದ ಮೂಲಕ ಆರೋಪಿಗಳನ್ನು ಬಂಧಿಸಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಕಾಶ್ ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್ ಮಾತನಾಡಿ, ಕೇರಳದಿಂದ ವಲಸೆ ಬಂದ ಎರಡು ಕೋಮಿನ ಕ್ರಿಮಿನಲ್ಸ್‍ಗಳೇ ಅಹಿತಕರ ಘಟನೆಗೆ ಮುಖ್ಯ ಕಾರಣ ಎಂದು ಪಶುಸಂಗೋಪನಾ ಇಲಾಖೆ ಸಚಿವ ಎ.ಮಂಜು ಅವರು ನೀಡಿರುವ ಹೇಳಿಕೆ ಖಂಡನೀಯವೆಂದರು. ಕೇರಳಿಗರು ಕೃತ್ಯಕ್ಕೆ ಕಾರಣಕರ್ತರು ಎನ್ನುವ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕೆ.ಎಸ್. ಪದ್ಮನಾಭ ಅವರು ಕೊಡಗಿನಲ್ಲೇ ಹುಟ್ಟಿ ಬೆಳೆದಿದ್ದು, ಇವರನ್ನು ವಲಸಿಗರೆಂದು ವ್ಯಾಖ್ಯಾನಿಸುವದು ಸರಿಯಲ್ಲವೆಂದು ವಿ.ಕೆ.ಲೋಕೇಶ್ ಹೇಳಿದರು.
ಇತ್ತೀಚೆಗೆ ಕಾಮಾಂಧರ ದೌರ್ಜನ್ಯಕ್ಕೆ ಬಲಿಯಾದ ಶಿಕ್ಷಕಿ ಪ್ರಮೀಳಾ ಅವರ ಕುಟುಂಬಕ್ಕೆ ರಾಜ್ಯ ಸರಕಾರ ರೂ.25 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಮಲಯಾಳಿ ಸೆಲ್‍ನ ಸಹ ಸಂಚಾಲಕರುಗಳಾದ ಕೆ.ವಿ. ಸುಬ್ರಮಣಿ, ಹರ್ಷವರ್ಧನ, ಜೀವನ್ ಹಾಗೂ ಪಿ.ಕೆ.ರಾಜನ್ ಉಪಸ್ಥಿತರಿದ್ದರು.