ಸೋಮವಾರಪೇಟೆ, ಆ. 8: ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯಿಂದ ಅಭಿವೃದ್ಧಿ ಕಾಮಗಾರಿ ಆಗುತ್ತಿಲ್ಲ. ಪಿಡಿಓ ಸ್ಪಂದಿಸುತ್ತಿಲ್ಲ ಎಂದು ಸುಳ್ಳು ಆರೋಪಗಳನ್ನು ಮಾಡಿ ತಾ. 9ರಂದು (ಇಂದು) ಪಂಚಾಯಿತಿ ಕಚೇರಿಗೆ ಬೀಗ ಜಡಿಯಲು ಕೆಲ ಸದಸ್ಯರು ಹವಣಿಸುತ್ತಿದ್ದು, ಪಂಚಾಯಿತಿಯ ಮೇಲಿನ ಆರೋಪ ಸಾಬೀತು ಮಾಡಿ ನಂತರ ಬೀಗ ಜಡಿಯಲಿ ಎಂದು ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಅವರು ತಿರುಗೇಟು ನೀಡಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯಿತಿ ಆಡಳಿತವು ಪಾರದರ್ಶಕತೆಯಿಂದ ನಡೆಯುತ್ತಿದ್ದು, ಕೆಲವು ಸದಸ್ಯರೇ ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಉತ್ತಮವಾಗಿ ಕೆಲಸವನ್ನು ಮಾಡುತ್ತಿದ್ದು, ಸರ್ಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡಿದ್ದಾರೆ. ಆದರೆ ಇದನ್ನು ಸಹಿಸದ ಸದಸ್ಯರುಗಳು ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ದಿ ಅಧಿಕಾರಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಜೆಸಿಬಿ ಮೂಲಕ ಸದಸ್ಯರು ಕೆಲಸ ಮಾಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಇನ್ನೂ ಕೆಲ ಸದಸ್ಯರು ಪಂಚಾಯಿತಿ ವತಿಯಿಂದ ನೀಡುವ ದನದ ಕೊಟ್ಟಿಗೆ, ಇಂಗು ತಡೆಗೋಡೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಕಾಮಗಾರಿ ಗಳನ್ನು ಗುತ್ತಿಗೆದಾರರಿಗೆ ನೀಡುವ ಸಂದರ್ಭ ಕೆಲವು ಸದಸ್ಯರು ಮಾನಸಿಕ ತೊಂದರೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

14ನೇ ಹಣಕಾಸು ಯೋಜನೆ ಯಡಿ ಪಂಚಾಯಿತಿಗೆ ಬಿಡುಗಡೆ ಯಾಗಿರುವ 9 ಲಕ್ಷ ಹಣದಲ್ಲಿ ರೂ. 8ಲಕ್ಷ ಹಣವನ್ನು ವಿವಿಧ ಕಾಮಗಾರಿಗಳಿಗೆ ವಿನಿಯೋಗಿಸ ಲಾಗಿದೆ. ಹಲವು ಕಾಮಗಾರಿಗಳು ಇನ್ನೂ ಪೂರ್ಣಗೊಂಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿರುವ ಯಾದವ್ ಅವರನ್ನು ಆಗಸ್ಟ್ 20ರವರೆಗೆ ಇಲ್ಲಿಯೇ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಕೆಲಸಗಳು ನಡೆಯುತ್ತಿದ್ದರೂ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರಿಗೆ ತಪ್ಪು ಮಾಹಿತಿ ನೀಡಿರುವ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಣ್ಣ, ಮಾಚಯ್ಯ, ವಿಶಾಲಾಕ್ಷಿ, ಬಿ.ಡಿ. ಕುಮಾರಿ ಅವರುಗಳು, ತಾ.9ರಂದು ಕಛೇರಿಗೆ ಬೀಗ ಹಾಕಿ ಪ್ರತಿಭಟಿಸುವ ತೀರ್ಮಾನ ಕೈಗೊಂಡಿರುವದು ಸರಿಯಲ್ಲ. ಈ ಸಂದರ್ಭ ಪಂಚಾಯಿತಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕೆಂದು ಪೊಲೀಸ್ ಠಾಣೆಗೆ ಮನವಿ ಮಾಡಿದ್ದೇನೆ ಎಂದು ಪವಿತ್ರ ಹೇಳಿದರು.