ಸುಂಟಿಕೊಪ್ಪ, ಅ. 1: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆ ಯಲ್ಲಿ ವಿಜ್ಞಾನ ಸಂಘ, ಇಕೋ ಕ್ಲಬ್ ಆಶ್ರಯದಲ್ಲಿ ಡೆಂಗ್ಯೂ, ಚಿಕುನ್‍ಗುನ್ಯ ಹಾಗೂ ಮಲೇರಿಯಾ ರೋಗಗಳ ತಡೆಗೆ ಸಂಬಂಧಿಸಿದಂತೆ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಸಂಘದ ಸಂಚಾಲಕ ಶಿಕ್ಷಕಿ ಎಂ.ಎನ್. ಲತಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಚರಂಡಿಯನ್ನು ಶುಚಿತ್ವದಿಂದ ಕಾಪಾಡಿಕೊಂಡರೆ ರೋಗಮುಕ್ತ ಜೀವನ ನಡೆಸಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡುವದರೊಂದಿಗೆ ಶುದ್ಧ ಕುಡಿಯುವ ನೀರಿನ ಬಳಕೆ ಮಾಡಬೇಕು ಎಂದರು.

ಇಕೋ ಕ್ಲಬ್‍ನ ಸಂಚಾಲಕ ಶಿಕ್ಷಕ ಟಿ.ಜಿ. ಪ್ರೇಮ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಡೆಂಗ್ಯೂ, ಚಿಕುನ್‍ಗುನ್ಯ ಹಾಗೂ ಮಲೇರಿಯಾ ರೋಗಗಳು ಬಾರದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದಲ್ಲಿ ರೋಗ-ರುಜಿನಗಳಿಂದ ಮುಕ್ತವಾಗಿರಲು ಸಾಧ್ಯ ಎಂದರು.

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ನಾಗೇಂದ್ರಾ ಚಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಬೇಕು ಎಂದರು.

ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಬಿ.ಟಿ. ಚಂದ್ರಮ್ಮ ಬಹುಮಾನ ವಿತರಿಸಿದರು. ಕಿರಿಯ ಆರೋಗ್ಯ ಸಹಾಯಕಿ ಕೆ.ಕೆ. ಕಾಂತಿಮಣಿ, ಶಿಕ್ಷಕಿ ಎಸ್.ಆರ್. ಚಿತ್ರಾ ಇದ್ದರು. ವಿದ್ಯಾರ್ಥಿನಿ ಪಿ.ಕೆ. ಲಿಖಿತಾ ಕಾರ್ಯಕ್ರಮ ನಿರ್ವಹಿಸಿ, ವಿದ್ಯಾರ್ಥಿನಿ ರೆನಿಸಾ ರೋಡ್ರಿಗಸ್ ಸ್ವಾಗತಿಸಿದರೆ, ವಿದ್ಯಾರ್ಥಿನಿ ಶಹನಾಜ್ ಖಾನಂ ವಂದಿಸಿದರು.