ಕುಶಾಲನಗರ, ಸೆ. 16: ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಆರೋಗ್ಯ ಅಧಿಕಾರಿ ಶ್ರೀರಂಗಪ್ಪ ಅವರೊಂದಿಗೆ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿದರು.

ಈ ಸಂದರ್ಭ ಸರಿಯಾದ ನಿರ್ವಹಣೆಯಿಲ್ಲದ ಶೌಚಾಲಯ ಮತ್ತು ಸ್ನಾನಗೃಹಗಳ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಎಕ್ಸ್-ರೆ ಕೊಠಡಿ ಹಾಗೂ ಪ್ರಯೋಗಾಲಯಕ್ಕೆ ತೆರಳಿದ ಸಿಇಓ ಚಾರುಲತಾ ಅವರು ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸಮರ್ಪಕವಾದ ರೀತಿಯಲ್ಲಿ ಸೇವೆಯನ್ನು ನೀಡುವಂತೆ ಸಿಬ್ಬಂದಿಗಳಿಗೆ ಸೂಚಿಸಿದರು. ವೈದ್ಯರಿಲ್ಲದೇ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರಕುತ್ತಿಲ್ಲ ಎಂಬ ಪತ್ರಕರ್ತರ ದೂರಿಗೆ ಸ್ಪಂದಿಸಿದ ಅವರು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಗತಿಗಳ ಕುರಿತು ಮಾಹಿತಿ ನೀಡಲಾಗಿದೆ. ಸಚಿವರಿಗೂ ಕೂಡ ಆಸ್ಪತ್ರೆಗಳ ಸುಧಾರಣೆಯತ್ತ ಹೆಚ್ಚಿನ ಕಾಳಜಿ ಇದೆ. ಆದ್ದರಿಂದ ಆದಷ್ಟು ಬೇಗ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವದು ಎಂದರು.

ಈ ಸಂದರ್ಭ ಸಿಇಓ ಅವರೊಂದಿಗಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀರಂಗಪ್ಪ ಜಿಲ್ಲೆಯ ಆಸ್ಪತ್ರೆಗಳಲ್ಲಿ ಇರುವ ವೈದ್ಯರ ಕೊರತೆಗಳ ಬಗ್ಗೆ ಮಾಹಿತಿ ಒದಗಿಸಿದರು. ಕೊಡಗಿನ 29 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 12 ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆ ಇರುವದಾಗಿ ಡಾ. ಶ್ರೀರಂಗಪ್ಪ ತಿಳಿಸಿದರು. ಓರ್ವ ವೈದ್ಯರು ಕರ್ತವ್ಯಕ್ಕೆ ಗೈರಾಗುತ್ತಿದ್ದು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ರೋಗಿಗಳು ವೈದ್ಯರ ಕೊರತೆ ಎದುರಿಸುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಸದ್ಯದಲ್ಲಿಯೇ ತಜ್ಞ ವೈದ್ಯರ ನೇಮಕ ಮಾಡಲಾಗುವದು ಎಂದು ಅವರು ಭರವಸೆ ನೀಡಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್ ಹಾಗೂ ಎಸ್.ಎನ್. ನರಸಿಂಹ ಮೂರ್ತಿ ಅವರು ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಸಿಇಓ ಅವರಲ್ಲಿ ಮನವಿ ಮಾಡಿದರು. ಆಸ್ಪತ್ರೆಯ ರಕ್ಷಾ ಸಮಿತಿಯ ಕಾರ್ಯನಿರ್ವಹಣೆಯ ಬಗ್ಗೆಯೂ ಶಶಿಧರ್ ಅಸಮಧಾನ ವ್ಯಕ್ತಪಡಿಸಿದರು.