ವೀರಾಜಪೇಟೆ, ಡಿ. 14: ಸಿದ್ದಾಪುರ ಬಳಿಯ ಬಾಡಗ-ಬಾಣಂಗಾಲದ ಆರೋಗ್ಯ ಕೇಂದ್ರಕ್ಕೆ ಕಳೆದ ಅನೇಕ ತಿಂಗಳುಗಳಿಂದ ಬೀಗ ಜಡಿದಿರುವದರಿಂದ ಬಾಡಗ-ಮಾಲ್ದಾರೆ ನಿವಾಸಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ಸೇವೆಯಿಂದ ವಂಚಿತರಾಗಿದ್ದಾರೆ ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಜಾರ್ಜ್ ಹಾಗೂ ಅಲ್ಲಿನ ನಿವಾಸಿಗಳು ದೂರಿದ್ದಾರೆ.
ಬಾಡಗ-ಬಾಣಂಗಾಲ ಗ್ರಾಮದ ಹೃದಯ ಭಾಗದಲ್ಲಿ ಅನೇಕ ವರ್ಷಗಳ ಹಿಂದೆ ಆರೋಗ್ಯ ಕೇಂದ್ರವನ್ನು ಆಧುನಿಕ ಸೌಲಭ್ಯಗಳೊಂದಿಗೆ ಆರಂಭಿಸಲಾಗಿದೆ. ಕಟ್ಟಡದ ಪಕ್ಕದಲ್ಲಿಯೇ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ದಾದಿಯರು, ಸಹಾಯಕರಿಗೆ ವಸತಿಗೃಹವನ್ನು ನಿರ್ಮಿಸಲಾಗಿದ್ದರೂ ದಾದಿಯರ ಹಾಜರಾತಿ ಇಲ್ಲ. ಗೈರು ಹಾಜರಾದರೂ ಕೇಂದ್ರದ ಹೆಸರಿನಲ್ಲಿ ವೇತನ ಮಾತ್ರ ಡ್ರಾ ಮಾಡಲಾಗುತ್ತಿದೆ. ಸೇವೆ ಮಾತ್ರ ಶೂನ್ಯ. ಗ್ರಾಮಸ್ಥರು ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಇದರಿಂದ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಎಲ್ಲರಿಗೂ ತೊಂದರೆಯಾಗಿದೆ. ರೋಗಿಗಳಿಗೆ ಆಸ್ಪತ್ರೆಯ ಪ್ರಥಮ ಚಿಕಿತ್ಸೆಗಾಗಿ ಸುಮಾರು 12 ಕಿ.ಮೀ. ದೂರದ ಸಿದ್ದಾಪುರದ ಆಸ್ಪತ್ರೆಯನ್ನು ಅವಲಂಭಿಸಬೇಕಾಗಿದೆ. ಬಾಡಗ-ಬಾಣಂಗಾಲದ ಆರೋಗ್ಯ ಕೇಂದ್ರಕ್ಕೆ ನಿಯೋಜಿತ ಗೊಂಡಿರುವ ಮುಖ್ಯ ದಾದಿ ಹಾಗೂ ಸಹಾಯಕರು ಕುಶಾಲನಗರದಲ್ಲಿ ಮನೆ ಮಾಡಿಕೊಂಡಿದ್ದು ಲಸಿಕೆ ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಿ ಹಾಜರಾತಿ ಪುಸ್ತಕದಲ್ಲಿ ಎಲ್ಲಾ ದಿನಗಳ ಹಾಜರಾತಿ ಹಾಕಿ ಮನೆಗೆ ಹಿಂತೆರಳುತ್ತಾರೆ ಎಂದು ಗ್ರಾಮಸ್ಥ ಆನಂದ್ ಆರೋಪಿಸಿದ್ದಾರೆ.
ಸರಕಾರ ವಿಫಲ: ಜೆ.ಡಿ.ಎಸ್. ಆರೋಪ
ಬಾಡಗ-ಬಾಣಂಗಾಲ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದಿರುವದರಿಂದ ಸಾರ್ವಜನಿಕರ ಆರೋಗ್ಯ ರಕ್ಷಣೆ ಹಾಗೂ ಆರೋಗ್ಯ ಕಾಪಾಡಲು ಸರಕಾರ ವಿಫಲಗೊಂಡಿದೆ. ಅನೇಕ ತಿಂಗಳುಗಳಿಂದ ಬಾಡಗ-ಬಾಣಂಗಾಲದ ಗ್ರಾಮಸ್ಥರನ್ನು ವಂಚಿಸಿರುವ ಸರಕಾರ ಆರೋಗ್ಯ ಕೇಂದ್ರಕ್ಕೆ ನಿರಂತರವಾಗಿ ಬೀಗ ಜಡಿದಿರುವ ಕುರಿತು ಗಮನ ಹರಿಸಿಲ್ಲ. ಕೇಂದ್ರದ ಸುತ್ತಮುತ್ತಲಿನ ನಿವಾಸಿಗಳನ್ನು ವಿಚಾರಿಸಿದರೆ ವರ್ಷಕ್ಕೆ ಮಕ್ಕಳಿಗೆ ಎರಡು ಬಾರಿ ಕೇಂದ್ರ ಸರಕಾರದ ರಾಷ್ಟ್ರೀಯ ಆರೋಗ್ಯ ಇಲಾಖೆಯಿಂದ ಪಲ್ಸ್ ಪೋಲೀಯೋ ಹನಿ ಹಾಗೂ ಲಸಿಕೆ ಹಾಕುವ ಎರಡು ದಿನ ಮಾತ್ರ ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ಕೇಂದ್ರ ತೆರೆದಿರುತ್ತದೆ. ಉಳಿದ ದಿನಗಳು ಕೇಂದ್ರ ಮುಚ್ಚಿರುತ್ತದೆ ಎಂದು ಗ್ರಾಮಸ್ಥರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಜಿಲ್ಲಾ ಸಮಿತಿಯ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರು ಸಂಬಂಧಿಸಿದ ವೈದ್ಯರು ಹಾಗೂ ಇಲಾಖಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು.
ಒಂದು ಸಾವಿರ ಜನ ಸಂಖ್ಯೆ ಹೊಂದಿರುವ ಬಾಡಗ-ಬಾಣಂಗಾಲದ ಆರೋಗ್ಯ ಕೇಂದ್ರಕ್ಕೆ ಪಕ್ಷದ ಕಾರ್ಯಕರ್ತರೊಂದಿಗೆ ಖುದ್ದು ಭೇಟಿ ನೀಡಿದ ಸಂಕೇತ್ ಪೂವಯ್ಯ ಅವರು ಆರೋಗ್ಯ ಕೇಂದ್ರದ ಸುತ್ತ ಮುತ್ತ ಕಾಡು ಬೆಳೆದಿದ್ದನ್ನು ನೋಡಿದಾಗ ಈ ಕೇಂದ್ರ ಕಾರ್ಯ ನಿರ್ವಹಿಸದೆ ವರ್ಷಗಳ ಮೇಲಾಗಿದೆ. ಸರಕಾರ ಈ ಆರೋಗ್ಯ ಕೇಂದ್ರದ ಕುರಿತು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಇದರಿಂದ ಗ್ರಾಮಸ್ಥರು ಆರೋಗ್ಯ ರಕ್ಷಣೆಯಲ್ಲಿ ತ್ರಿಶಂಕು ಸ್ಥಿತಿಯನ್ನು ಕಾಣುವಂತಾಗಿದೆ. ಈ ವ್ಯವಸ್ಥೆಯನ್ನು ಮುಂದಿನ 7 ದಿನಗಳೊಳಗೆ ಸರಿಪಡಿಸಿ ಅಗತ್ಯ ದಾದಿಯರು, ಸಹಾಯಕರನ್ನು ನೇಮಿಸಿ ಗ್ರಾಮದ ರೋಗಿಗಳ ಬೇಡಿಕೆಗೆ ಸ್ಪಂದಿಸದಿದ್ದರೆ ಆರೋಗ್ಯ ಕೇಂದ್ರದ ಮುಂದೆ ಗ್ರಾಮಸ್ಥರು, ಪಂಚಾಯಿತಿ ಸದಸ್ಯರುಗಳೊಂದಿಗೆ ಧರಣಿ ಮುಷ್ಕರ ಹೂಡಲಾಗುವದು ಎಂದು ಸಂಕೇತ್ ಪೂವಯ್ಯ ಎಚ್ಚರಿಸಿದ್ದಾರೆ.
ಬಾಡಗ-ಬಾಣಂಗಾಲ ಗ್ರಾಮದಲ್ಲಿ ಜಾತ್ಯತೀತ ಜನತಾದಳದ ಕಾರ್ಯಕರ್ತರ ಸಭೆ ನಡೆಯುತ್ತಿದ್ದ ಸಂದರ್ಭ ಗ್ರಾಮಸ್ಥರು ಜನತಾದಳದ ಮುಖಂಡರು ಹಾಗೂ ಕಾರ್ಯಕರ್ತರಿಗೆ ದೂರನ್ನು ನೀಡಿದಾಗ ಪಕ್ಷದ ಕಾರ್ಯಕರ್ತರು ಪಕ್ಕದಲ್ಲಿಯೇ ಇದ್ದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಪಕ್ಷದ ಮುಖಂಡರುಗಳಾದ ಎಸ್.ಹೆಚ್. ಮತೀನ್, ಮನ್ಸೂರ್ ಆಲಿ, ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಪಿ.ಕೆ. ರಷೀದ್, ತೀತಿರ ಮಂದಣ್ಣ, ಚನ್ನಂಗಿಯ ಎಂ.ಕೆ. ವಸಂತ್, ಪಕ್ಷದ ತಾಲೂಕು ಸಮಿತಿ ಅಧ್ಯಕ್ಷ ಎಂ.ಸಿ. ಬೆಳ್ಳಿಯಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್, ಹೆಚ್.ಜಿ. ಗೋಪಾಲ್, ವಿ.ಸಿ. ದೇವರಾಜ್, ಜಿ.ಬಿ. ಸೋಮಯ್ಯ, ಪಿ.ವಿ. ರೆನ್ನಿ, ಖಾದರ್, ಅಯ್ಯಪ್ಪ ಮತ್ತಿತರರು ಹಾಜರಿದ್ದರು.