ಮಡಿಕೇರಿ, ನ. 7: ಶಾಂತಿಯಿಂದ ಕೂಡಿದ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮೂಲಕ ಅಶಾಂತಿ ಉಂಟು ಮಾಡಿದೆ. ಇದರಿಂದ ಕಳೆದ ವರ್ಷ ಜಯಂತಿ ಆಚರಣೆ ಸಂದರ್ಭ ಕುಟ್ಟಪ್ಪನವರನ್ನು ನಾವು ಕಳೆದುಕೊಂಡಿದ್ದೇವೆ. ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಜನತೆ ಟಿಪ್ಪು ಜಯಂತಿ ಪ್ರಸಕ್ತ ಸಾಲಿನಲ್ಲಿ ಆಚರಣೆಗೆ ತೀವ್ರ ವಿರೋಧವಿದ್ದರೂ, ರಾಜ್ಯ ಸರ್ಕಾರ ಜನತೆಯ ತೀವ್ರ ವಿರೋಧಗಳ ನಡುವೆಯೂ ರಾಜ್ಯಾದ್ಯಂತ ಟಿಪ್ಪು ಜಯಂತಿಯ ಆಚರಣೆಗೆ ಮುಂದಾಗಿರುವದನ್ನು ನಿಷ್ಟುರವಾಗಿ ಖಂಡಿಸುತ್ತೇನೆ. ಈ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿಯ ಸರ್ಕಾರಿ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ವಿಧಾನ ಪರಿಷತ್ ಶಾಸಕನಾದ ನನ್ನ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಬಾರದೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದ್ದಾರೆ.
ಟಿಪ್ಪು ಜಯಂತಿಗೆ ನಾಡಿನ ಪ್ರಜ್ಞಾವಂತರು, ಸಾರ್ವಜನಿಕರು ಹಾಗೂ ವಿಚಾರವಾದಿಗಳು ಬಹು ದೊಡ್ದ ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಟಿಪ್ಪು ಸುಲ್ತಾನ್ ಕನ್ನಡ ಹಾಗೂ ಹಿಂದೂ ವಿರೋಧಿಯೆಂದು ಇತಿಹಾಸದಿಂದ ತಿಳಿದುಬಂದಿದೆ. ಅದರಲ್ಲೂ ಕೊಡಗಿನಲ್ಲಿ ಸುಮಾರು 300 ಹಿಂದೂ ದೇವಾಲಯಗಳನ್ನು ಲೂಟಿಮಾಡಿ, ಧ್ವಂಸಗೊಳಿದ್ದಾನೆ. ಕೊಡಗಿನಲ್ಲಿ ಕ್ರಿಶ್ಚಿಯನ್ ಚರ್ಚ್‍ಗಳನ್ನು ನೆಲಸಮಗೊಳಿಸಿ, ಕ್ರಿಶ್ಚಿಯನ್ನರನ್ನು ವಿಕೃತವಾಗಿ ಕೊಲೆ ಮಾಡಿಸಿದ್ದಾನೆ. ಮೂರನೇ ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನ್ ಕೊಡಗಿನ ಗೌಡ, ಕೊಡವ, ಗೊಲ್ಲ, ಕೊಂಕಣಿ, ಕ್ರಿಶ್ಚನ್ನರನ್ನು ಬಂಧಿಸಿ, ಶ್ರೀರಂಗಪಟ್ಟಣಕ್ಕೆ ಬಲವಂತವಾಗಿ ಎಳೆದೊಯ್ದು, ಮತಾಂತರಿಸಿ, ಹಿಂಸಾಚಾರ ಮಾಡಿರುತ್ತಾನೆ. ಅದೇ ರೀತಿ ಮಂಗಳೂರಿನಲ್ಲೂ ಕ್ರಿಶ್ಚನ್ನರು, ಕೊಂಕಣಿ ಜನಾಂಗದವರನ್ನೂ ಸಹ ಮತಾಂತರಗೊಳಿಸಿ, ರಾಜ್ಯದ ಹಲವಾರು ದೇವಾಲಯಗಳು, ಚರ್ಚ್ ಗಳನ್ನು ದ್ವಂಸ ಮಾಡಿರುತ್ತಾನೆ.
ಕೊಡಗಿನ ಜನರ ಮನೆಗಳನ್ನು ಲೂಟಿ ಮಾಡಿ, ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ, ಮನೆಗಳನ್ನು ಸುಟ್ಟುಹಾಕಿ ವಿಧ್ವಂಸಕ ಕೃತ್ಯವನ್ನೆಸಗಿದ್ದಾನೆ. ಟಿಪ್ಪು ಒಬ್ಬ ರಾಜನಾಗಿ ತನ್ನ ಆಸ್ಥಾನವನ್ನು ಉಳಿಸಿಕೊಳ್ಳಲು ಎಲ್ಲಾ ರಾಜರಂತೆ ಯುದ್ಧ ಮಾಡಿದನೇ ಹೊರತು, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರನಲ್ಲ. ಕೊಡಗಿನಲ್ಲಿ ಹಿಂದೂ, ಕ್ರಿಶ್ಚನ್ನರು ಹಾಗೂ ಮುಸಲ್ಮಾನರೂ ಸಹ ಬಾಳ್ವೆಯನ್ನು ನಡೆಸುತ್ತಿದ್ದು, ಕೊಡಗಿನಲ್ಲಿನ ಪ್ರಜ್ಞಾವಂತ ಹಿಂದೂಗಳಾಗಲೀ, ಕ್ರಿಶ್ಚನ್ನರಾಗಲೀ, ಮುಸಲ್ಮಾನರಾಗಲೀ ಟಿಪ್ಪು ಜಯಂತಿ ಆಚರಣೆ ಬೇಕೆಂದು ಬೇಡಿಕೆ ಇಟ್ಟವರಲ್ಲ. ಆದರೂ ವ್ಯಾಪಕ ವಿರೋಧದ ನಡುವೆಯೂ ಜನರ ಭಾವನೆಗಳಿಗೆ ಸ್ಪಂದಿಸದೇ, ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಈ ವರ್ಷವೂ ಮುಂದಾಗಿರುವದು ನಮ್ಮ ನಾಡಿನ ದುರಂತ. ರಾಜ್ಯದ ಹಾಗೂ ಕೊಡಗಿನ ಸಂಸ್ಕೃತಿ, ಆಚಾರ, ವಿಚಾರಗಳಿಗೆ ಭಾವನಾತ್ಮಕವಾಗಿ ಧಕ್ಕೆ ಉಂಟಾಗಿದ್ದು, ಟಿಪ್ಪು ಜಯಂತಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ತಕ್ಷಣ ರಾಜ್ಯ ಸರ್ಕಾರ ವಿವೇಚನೆಯಿಂದ ವರ್ತಿಸಿ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಕೈಬಿಡಬೇಕು. ಇಲ್ಲದಿದ್ದಲ್ಲಿ ಮುಂದಿನ ಆಗುಹೋಗುಗಳಿಗೆ ಸಿದ್ದರಾಮಯ್ಯ ನವರ ನೇತೃತ್ವದ ರಾಜ್ಯ ಸರಕಾರವೇ ಹೊಣೆ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ.