ಕುಶಾಲನಗರ, ಆ 10: ಆನೆ-ಮಾನವ ಸಂಘರ್ಷ ಹಿನ್ನೆಲೆಯಲ್ಲಿ ಉಂಟಾಗುತ್ತಿರುವ ಅನಾಹುತಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಅಧ್ಯಯನ ಸಂಸ್ಥೆಯೊಂದು ಕೊಡಗು ಜಿಲ್ಲೆಗೆ ಭೇಟಿ ನೀಡಿ ಪೂರ್ವಭಾವಿ ಚರ್ಚೆ ನಡೆಸಿದೆ.ಇಂಡೋ-ಜರ್ಮನ್ ಟೆಕ್ನಿಕಲ್ ಕೋ-ಆಪರೇಟಿವ್ ಸಂಸ್ಥೆಯ ಅಧ್ಯಯನ ತಂಡದ ಸದಸ್ಯರು ಬುಧವಾರ ದುಬಾರೆ ಸಾಕಾನೆ ಶಿಬಿರದಲ್ಲಿ ಜಿಲ್ಲೆಯ ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿದ್ದು ಹಲವು ಮಾಹಿತಿಗಳನ್ನು ಕಲೆಹಾಕಿವೆÉ. ಭಾರತದಲ್ಲಿ ಕೆಲವು ರಾಜ್ಯಗಳಲ್ಲಿ ಆನೆ-ಮಾನವ ಸಂಘರ್ಷ ಅತಿರೇಕಕ್ಕೆ ತಿರುಗಿದ್ದು, ಇದರಿಂದ ಅನಾಹುತಕ್ಕೆ ಒಳಗಾಗಿ ಹಲವು ಕುಟುಂಬಗಳು ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಬಗ್ಗೆ ಅಧ್ಯಯನ ತಂಡ ಸಮೀಕ್ಷೆ ನಡೆಸುತ್ತಿದೆ ಎಂದು ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ.ಮನೋಜ್‍ಕುಮಾರ್ ಮಾಹಿತಿ ನೀಡಿದ್ದಾರೆ.

ಜರ್ಮನ್ ದೇಶದ ಗಿಜ್ ಸಂಸ್ಥೆಯ ಮುಖ್ಯಸ್ಥ ಸ್ಟೆಫನ್ ಮ್ಯಾನ್ ನೇತೃತ್ವದ ತಂಡ ಈ ಅಧ್ಯಯನ ನಡೆಸುತ್ತಿದ್ದು, ಎರಡೂ ರಾಷ್ಟ್ರಗಳ ಸೌಹಾರ್ಧಯುತ ಸಂಬಂಧ ಸುಧಾರಣೆಯೊಂದಿಗೆ ದೇಶದ ಕೆಲವು ವಿಷಯಗಳ ಬಗ್ಗೆ ತಂಡ ವಿಶೇಷ ಅಧ್ಯಯನದಲ್ಲಿ ತೊಡಗಿದ್ದು, ಪರಿಹಾರ ಮಾರ್ಗ ಕಂಡುಹಿಡಿಯಲಿದೆ ಎಂದು ತಿಳಿಸಿರುವ ಮನೋಜ್‍ಕುಮಾರ್, ಕೊಡಗು ಸೇರಿದಂತೆ ವಿವಿಧೆಡೆ ಮಾನವ ಆನೆ ಸಂಘರ್ಷ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಭಾರತ ಮತ್ತು ಜರ್ಮನ್ ಸರಕಾರಗಳ ಸಹಯೋಗದೊಂದಿಗೆ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ಯೋಜನೆಯೊಂದಿಗೆ ಬೆಳೆಹಾನಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಂಡ ಪೂರ್ವಭಾವಿಯಾಗಿ

(ಮೊದಲ ಪುಟದಿಂದ) ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದೆ ಎಂದು ಮಾಹಿತಿ ಒದಗಿಸಿದರು.

ಕೊಡಗು ಜಿಲ್ಲೆಯ ದುಬಾರೆ, ಮಾಲ್ದಾರೆ ಮುಂತಾದ ಸ್ಥಳಗಳಿಗೆ ತಂಡ ಭೇಟಿ ನೀಡಿದ್ದು, ಸಮಸ್ಯೆಗಳ ಬಗ್ಗೆ ಸಮಗ್ರ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಿದೆ. ತಜ್ಞರ ಸಲಹೆಯ ಮೇರೆಗೆ ಕೊಡಗು ಜಿಲ್ಲೆಯ ಕೆಲವು ಕಾಡಾನೆ ಧಾಳಿಯ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಬಗ್ಗೆ ಯೋಜನಾ ವರದಿ ತಯಾರಿಸಿ ಮುಂದಿನ ವರ್ಷದಲ್ಲಿ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಯತ್ನ ನಡೆಯಲಿದೆ ಎಂದರು.

ಈ ಸಂದರ್ಭ ಮಾತನಾಡಿದ ತಂಡದ ಮುಖ್ಯಸ್ಥ ಜರ್ಮನಿಯ ಸ್ಟೆಫನ್ ಮ್ಯಾನ್, ಜರ್ಮನ್ ದೇಶದಲ್ಲಿ ಶೇ.31 ರಷ್ಟು ಕಾಡು ಪ್ರದೇಶವಿದ್ದು, ಅರಣ್ಯದ ಬಗ್ಗೆ ಖಾಸಗಿ ಸಂಸ್ಥೆಗಳು ಕೂಡ ಆಸಕ್ತಿಯಿಂದ ನಿರ್ವಹಣೆ ಮಾಡುತ್ತಿವೆ. ಶೇ. 50 ರಷ್ಟು ಅರಣ್ಯ ಖಾಸಗಿ ಸುಪರ್ದಿಯಲ್ಲಿದೆ. ಖಾಸಗಿ ಕ್ಷೇತ್ರದಲ್ಲಿ ಬೆಳೆಯುವ ಮರಗಳನ್ನು ನೇರವಾಗಿ ಮಾರಾಟ ಮಾಡುವ ಅವಕಾಶ ಕೂಡ ಕಲ್ಪಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.

ಕಾಡು ಪ್ರಾಣಿಗಳ ಹಾವಳಿ ಕೂಡ ಜರ್ಮನಿಯಲ್ಲಿ ಕಡಿಮೆಯಿದ್ದು, ನಿಗದಿತ ಅವಧಿಯಲ್ಲಿ ಕೆಲವು ಪ್ರಾಣಿಗಳನ್ನು ಬೇಟೆಯಾಡಲು ಸರಕಾರ ಅವಕಾಶ ಕಲ್ಪಿಸುತ್ತದೆ. ಜಿಂಕೆ, ಚಿರತೆ, ಕಾಡುಹಂದಿ ಮುಂತಾದ ಪ್ರಾಣಿಗಳನ್ನು ಬೇಟೆಯಾಡಲು ಅವಕಾಶವಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಹಾನಿ ಆಗುತ್ತಿಲ್ಲ ಎಂದು ಮಾಹಿತಿ ನೀಡಿದರು.

ಯಾವದೇ ವ್ಯವಸ್ಥೆಯಲ್ಲಿ ಸಾರ್ವಜನಿಕರ ಪಾತ್ರ ಪ್ರಮುಖವಾಗಿದ್ದು, ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದರು. ಈ ನಿಟ್ಟಿನಲ್ಲಿ ಜರ್ಮನ್ ಮತ್ತು ಭಾರತ ಸರಕಾರ ಅಧ್ಯಯನ ತಂಡವೊಂದನ್ನು ರಚಿಸಿದ್ದು, ಈಗಾಗಲೆ ಸರಕಾರದ ಪ್ರಮುಖರೊಂದಿಗೆ ಚರ್ಚೆ ನಡೆದಿದೆ. ಪಶ್ಚಿಮ ಬಂಗಾಳ, ಜಾರ್ಖಂಡ್, ಉತ್ತರಾಖಂಡ್ ರಾಜ್ಯಗಳು ಸೇರಿದಂತೆ ಕರ್ನಾಟಕದ ಕೆಲವೆಡೆ ಪೂರ್ವಭಾವಿ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುತ್ತಿದೆ. ಒಂದು ತಿಂಗಳ ಒಳಗೆ ಕೇಂದ್ರ ಸರಕಾರಕ್ಕೆ ವರದಿ ನೀಡಲಾಗುವದು. ಈ ನಡುವೆ ಭಾರತ ಸರಕಾರದಿಂದ ತಜ್ಞರ ತಂಡವೊಂದು ಜರ್ಮನ್ ದೇಶಕ್ಕೆ ಭೇಟಿ ನೀಡಿ ಚರ್ಚೆ ನಡೆಸಲಿದೆ ಎಂದು ತಿಳಿಸಿದರು.

ತಂಡದಲ್ಲಿ ತಜ್ಞರಾದ ಅಜಯ್ ದೇಸಾಯಿ, ವಿದ್ಯಾ ಅತ್ರೇಯ, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ, ಉಪ ಅರಣ್ಯ ವಲಯಾಧಿಕಾರಿಗಳಾದ ರಂಜನ್, ಬಾನಂಡ ದೇವಿಪ್ರಸಾದ್ ಮತ್ತಿತರರು ಇದ್ದರು.