ಗೋಣಿಕೊಪ್ಪಲು, ಜೂ. 29: ಕೊಡಗು ಕರ್ನಾಟಕದ ಹೆಮ್ಮೆಯ ಜಿಲ್ಲೆ. ಕಾವೇರಿ ತವರಲ್ಲಿ ಜನತೆಯ ಸೇವೆ ಸಲ್ಲಿಸುವ ಭಾಗ್ಯ ದೊರೆತಿರುವದು ನಿಜಕ್ಕೂ ಸಂತಸ ತಂದಿದೆ.ಕೊಡಗಿನ ಜನರ ನಡೆ-ನುಡಿ, ಆಚಾರ-ವಿಚಾರ, ಶಿಸ್ತು-ಸಂಯಮ, ಶ್ರೀಮಂತ ಸಂಸ್ಕೃತಿ, ಶೌರ್ಯ-ಸಾಹಸಕ್ಕೆ ಹೆಸರಾದ ಯೋಧರ ನಾಡು, ಕ್ರೀಡೆಯ ತವರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಉದ್ಧೇಶದೊಂದಿಗೆ ಜುಲೈ 1 ರಂದು ಬರುತ್ತಿದ್ದೇನೆ. ಬೆಂಗಳೂರಿನಲ್ಲಿ ರಾಜ್ಯದ ಜಿಲ್ಲಾಧಿಕಾರಿಗಳ ಮಟ್ಟದ ಎರಡು ದಿನಗಳ ಸಭೆಯಲ್ಲಿ ಕೊಡಗಿನ ಮಳೆಗಾಲ ಮುಂಜಾಗ್ರತಾ ಕ್ರಮ, ಆನೆ- ಮಾನವ ಸಂಘರ್ಷದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಇಲಾಖಾಧಿಕಾರಿ ಗಳೊಂದಿಗೆ ಪೂರ್ವಭಾವಿಯಾಗಿ ಚರ್ಚಿಸಿದ್ದೇನೆ. ಜಿಲ್ಲೆಯ ಜನತೆಯ ಭಾವನೆಗಳಿಗೆ ಧಕ್ಕೆ ಬಾರದ ಹಾಗೆ, ಉತ್ತಮ ಪರಿಹಾರ ಮಾರ್ಗೋಪಾಯದ ಬಗ್ಗೆ ಚರ್ಚಿಸಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವದಾಗಿ ಕರ್ನಾಟಕ ವಿಜ್ಞಾನ-ತಂತ್ರಜ್ಞಾನ, ಯೋಜನಾ ಮತ್ತು ಸಾಂಖಿಕ ಸಚಿವ, ಕೊಡಗು ಉಸ್ತುವಾರಿ ನೂತನ ಸಚಿವ ಎಂ.ಆರ್. ಸೀತಾರಾಮ್ ‘ಶಕ್ತಿ’ಯೊಂದಿಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಅರಣ್ಯ ಮತ್ತು ಪರಿಸರ ಸಂರಕ್ಷಣೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಹಿನ್ನೆಲೆ ಎಲ್ಲಾ ವಿಧದ ವನ್ಯಪ್ರಾಣಿಗಳ ಸಂತತಿ ವೃದ್ಧಿಸಿದೆ. ಅರಣ್ಯದಲ್ಲಿ ವನ್ಯಪ್ರಾಣಿಗಳಿಗೆ ಅಗತ್ಯವಾದ ನೀರು-ಆಹಾರ ಕೊರತೆಯಿಂದಾಗಿ ಜನಪ್ರದೇಶದತ್ತ ಆನೆ ಮತ್ತಿತರ ಪ್ರಾಣಿಗಳು ನುಸುಳಿ ಬರುತ್ತಿವೆ.
ಕೊಡಗಿನಲ್ಲಿ ಆನೆ-ಮಾನವ ಸಂಘರ್ಷದ ತೀವ್ರತೆಯನ್ನು ತಾನು ಅರಿತಿದ್ದು, ಅಲ್ಪಾವಧಿಯಲ್ಲಿ ಪರಿಹಾರ ಹುಡುಕುವದು ಕಷ್ಟ ಸಾಧ್ಯ. ಈ ಬಗ್ಗೆ ಅರಣ್ಯದಲ್ಲಿ ಪ್ರಾಣಿಗಳಿಗೆ
ನೀರು-ಆಹಾರ ಒದಗಿಸುವ ನಿಟ್ಟಿನಲ್ಲಿ ಕೃಷಿಕರ ತೋಟಕ್ಕೆ, ರೈತರ ಮಡಿಗಳಿಗೆ ಕಾಡು ಪ್ರಾಣಿಗಳು ನುಸುಳದಿರಲು ದೀರ್ಘಾವಧಿ ಯೋಜನೆಯನ್ನು ರೂಪಿಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಮುಖ್ಯಮಂತ್ರಿಗಳ ಬಜೆಟ್‍ನಲ್ಲಿಯೂ ಆನೆ-ಮಾನವ ಸಂಘರ್ಷದ ಬಗ್ಗೆ ಉಲ್ಲೇಖವಿದೆ. ಕೊಡಗು ಜಿಲ್ಲೆಯ ಎಲ್ಲ ಇಲಾಖಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಹಾಗೂ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳಿಗೆ ವರದಿ ನೀಡಲಿದ್ದೇನೆ ಎಂದು ಸಚಿವರು ಮುನ್ಸೂಚನೆ ನೀಡಿದರು.
ಕೊಡಗಿನಲ್ಲಿ ಗಾಳಿ-ಮಳೆ ತೀವ್ರತೆ, ವಿದ್ಯುತ್ ಸಂಪರ್ಕ ಕಡಿತ, ಮಳೆ ಹಾನಿ ಪರಿಹಾರದಲ್ಲಿ ವಿಳಂಬಗತಿ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಸಚಿವರು, ಜುಲೈ ತಿಂಗಳಿನಲ್ಲಿ ಕೊಡಗು ಜಿಲ್ಲೆಗೆ ಎರಡು ಬಾರಿ ಪ್ರವಾಸ ಕೈಗೊಳ್ಳಲಿದ್ದು, ಇಲ್ಲಿನ ಪರಿಸ್ಥಿತಿಯನ್ನು ಕೂಲಂಕುಷವಾಗಿ ಅವಲೋಕಿಸಲಿದ್ದೇನೆ. ವಿದ್ಯುತ್ ಸಂಪರ್ಕ ಕಡಿತ ಹಾಗೂ ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಮಾಹಿತಿ ಹೊಂದಿಕೊಳ್ಳಲಾಗುವದು. ಕೆಪಿಟಿಸಿಎಲ್ ಹಾಗೂ ಸೆಸ್ಕ್ ಇಲಾಖೆಯಲ್ಲಿನ ಮಾರ್ಗದಾಳುಗಳ ಕೊರತೆ ನೀಗಿಸುವ ಬಗ್ಗೆಯೂ ಚರ್ಚಿಸಲಾಗುವದು. ಮಳೆ ಹಾನಿ ಪರಿಹಾರ ವಿಳಂಬವಾದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.
ಕೊಡಗು ಪ್ರವಾಸಿ ತಾಣವಾಗಿಯೂ ಅಭಿವೃದ್ಧಿಗೊಳ್ಳುತ್ತಿದ್ದು, ತಾನು 1996 ರಲ್ಲಿ ಪ್ರವಾಸಿಗನಾಗಿ ಕೊಡಗು ವೀಕ್ಷಣೆ ಮಾಡಿದ್ದೆ. ಪ್ರವಾಸಿತಾಣ ಅಭಿವೃದ್ಧಿಯಿಂದಾಗಿ ಕೊಡಗಿನ ಸಂಸ್ಕೃತಿಗೆ, ಜನತೆಯ ಭಾವನೆಗಳಿಗೆ ಧಕ್ಕೆ ಬಾರದ ಹಾಗೆ, ಪರಿಸರ ಪೂರಕ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒತ್ತು ನೀಡುವದಾಗಿ ಸೀತಾರಾಮ್ ಅಭಿಪ್ರಾಯಪಟ್ಟರು.
ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿ ತನಗೆ ಕಾಫಿ ತೋಟವಿದ್ದು, ಗಿರಿ ಶಿಖರದಲ್ಲಿನ ಹಿಮ ಇತ್ಯಾದಿ ಪ್ರಕೃತಿ ವಿಕೋಪದಿಂದಾಗಿ ತನಗೂ ವೈಯಕ್ತಿಕವಾಗಿ ಫಸಲು ನಷ್ಟ ಇತ್ಯಾದಿ ಅನುಭವ ಇದೆ. ಕೊಡಗು ಕಾಫಿ ಪ್ರಧಾನ ಜಿಲ್ಲೆಯಾಗಿದ್ದು ದರ ಕುಸಿತ, ಕಾರ್ಮಿಕರ ಅಭಾವ, ರಸಗೊಬ್ಬರ ಬೆಲೆಗಳ ಏರಿಕೆ, ಇದರ ನಡುವೆ ವನ್ಯಪ್ರಾಣಿಗಳ ಉಪಟಳದ ಬಗ್ಗೆಯೂ ಅರಿವಿದ್ದು ರಾಜ್ಯ ಸರ್ಕಾರದ ಮಟ್ಟದಲ್ಲಿ ಕಾಫಿ ಕೃಷಿಕರಿಗೆ ಏನಾದರೂ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದೇನೆ ಎಂದು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ ಮೂರು-ನಾಲ್ಕು ಉಸ್ತುವಾರಿ ಸಚಿವರ ಬದಲಾವಣೆಯಾಗುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿನ ಸಮಸ್ಯೆ ಬಗೆಹರಿಸಲು ಸಾಧ್ಯವಿದೆಯೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊಡಗು ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಾಗಿ ದಿನೇಶ್‍ಗುಂಡೂರಾವ್ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಲಾಗಿದೆ. ಅಧಿಕಾರ ವಿಕೇಂದ್ರೀಕರಣದ ಅನ್ವಯ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಚಿವರನ್ನು ಉಳಿಸಿಕೊಂಡು ಮತ್ತಷ್ಟು ಹೊಸಬರಿಗೆ ಸಚಿವ ಸ್ಥಾನ ಮಾನ ನೀಡಲಾಗಿದೆ. ತನಗೂ ಇದೇ ಪ್ರಥಮ ಬಾರಿಗೆ ಸಚಿವ ಸ್ಥಾನ ದೊರಕಿದೆ. ಕೊಡಗಿನ ವಿದ್ಯಾವಂತ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಕಾರ್ಯನಿರ್ವಹಿಸುವದು ತನಗೂ ಹೆಮ್ಮೆ ಎನಿಸಿದೆ ಎಂದು ನುಡಿದರು.
ಕೈವಾರ ತಾತಯ್ಯ ಸ್ಮರಣೆ
ಚಿಕ್ಕಬಳ್ಳಾಪುರ-ಕೋಲಾರ ಸುತ್ತಮುತ್ತಲಿನ ಜನತೆಗೆ ಕೈವಾರ ತಾತಯ್ಯ ಕ್ಷೇತ್ರ ಪವಿತ್ರ ಧಾರ್ಮಿಕ ಸ್ಥಳವಾಗಿದೆ. ತನ್ನ ಸಹೋದರ ಎಂ.ಆರ್. ಜಯರಾಮ್ ಧರ್ಮದರ್ಶಿಯಾಗಿದ್ದು ದಿನಂಪ್ರತಿ 1500ಕ್ಕೂ ಅಧಿಕ ಭಕ್ತಾದಿಗಳು ಭೇಟಿ ನೀಡುತ್ತಿದ್ದಾರೆ. ವರ್ಷಪೂರ್ತಿ ಸಾಮೂಹಿಕ ಭೋಜನವಿದ್ದು, ಕೈವಾರ ತಾತಯ್ಯ ಜೀವಂತ ಸಮಾಧಿಯಾದ ಸ್ಥಳದಲ್ಲಿ, ಮಣ್ಣಿನಲ್ಲಿ ವಿಶೇಷ ಶಕ್ತಿ ಇದ್ದು ವಾರ್ಷಿಕ ಉತ್ಸವದಲ್ಲಿ ತಾನೂ ಪಾಲ್ಗೊಳ್ಳುತ್ತಿದ್ದೇನೆ.ವೃದ್ಧಾಶ್ರಮ, ಇನ್ನಿತರ ಸಮಾಜ ಸೇವಾ ಕಾರ್ಯಗಳಿಗೆ ತನ್ನಿಂದಾದ ನೆರವನ್ನು ಕಲ್ಪಿಸುತ್ತಿದ್ದೇನೆ. ಯಾವದೇ ಜಾತಿ ಧರ್ಮದ ಭೇದ ಭಾವವಿಲ್ಲದೆ ವೈಯಕ್ತಿಕವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವದಾಗಿ ಹೇಳಿದರು.
ಎಂ.ಆರ್. ಸೀತಾರಾಂ ಪರಿಚಯ
ಬಿಎಸ್‍ಸಿ ಪದವೀಧರರಾದ ಸೀತಾರಾಮ್ ಅವರು ಎಂ.ಎಸ್. ರಾಮಯ್ಯ ಚಾರಿಟೇಬಲ್ ಟ್ರಸ್ಟ್‍ನ ಉಪಾಧ್ಯಕ್ಷರಾಗಿದ್ದು, ಟ್ರಸ್ಟ್ ಮೂಲಕ ರಾಜ್ಯದ ಬಡ ಮಧ್ಯಮ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಉತ್ತೇಜನ ನೀಡುತ್ತಾ ಬಂದಿದ್ದಾರೆ. ಕೊಡಗಿನ ಬಹುತೇಕ ವಿದ್ಯಾರ್ಥಿಗಳು ಕಳೆದ 20 ವರ್ಷಗಳಿಂದಲೂ ಇದರ ಪ್ರಯೋಜನ ಹೊಂದುತ್ತಿದ್ದಾರೆ. 1983ರಲ್ಲಿ ರಾಜೀವ್ ಗಾಂಧಿ ಅವರು ಯುವಜನಕ್ಕೆ ರಾಜಕೀಯ ಪ್ರವೇಶಿಸಲು ಕರೆ ನೀಡಿದ ಸಂದರ್ಭ ಯಲಹಂಕ ಕ್ಷೇತ್ರದಿಂದ ಯುವ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಳ್ಳುವ ಮೂಲಕ ರಾಜಕೀಯ ಪ್ರವೇಶ ಪಡೆದರು. ಬಳಿಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಬೆಂಗಳೂರು ಜಿಲ್ಲಾ ಘಟಕದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಯುವ ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿ, 1991 ರಲ್ಲಿ ರಾಜ್ಯ ಕಾಂಗ್ರೆಸ್ ಸೇವಾದಲದ ಸಂಚಾಲಕನಾಗಿ, 1996 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದ ಸಚಿವರು 1999 ರಲ್ಲಿ ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಎರಡು ಬಾರಿ ಶಾಸಕ (ಮಲ್ಲೇಶ್ವರಂ)ರಾಗಿದ್ದ ಸೀತಾರಾಮ್ ಅವರು 2012 ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು ಇದೀಗ ಕಾಂಗ್ರೆಸ್ ಪಕ್ಷವು ಇವರನ್ನು ಗುರುತಿಸಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನಮಾನ ನೀಡಿ ಗೌರವಿಸಿದೆ.
ಕೊಡಗಿನ ಕಾಫಿ ಗುಣಮಟ್ಟದಲ್ಲಿ ಅತ್ಯುತ್ತಮವಾಗಿದೆ ಎಂದು ನುಡಿದ ಸಚಿವರು ಜಿಲ್ಲೆಯ ಪತ್ರಕರ್ತರಿಂದಲೂ ಕೊಡಗು ಅಭಿವೃದ್ಧಿಯ ನಿಟ್ಟಿನಲ್ಲಿ ಉತ್ತಮ ಸಲಹೆಗಳನ್ನು ನಿರೀಕ್ಷಿಸುವದಾಗಿ ತಿಳಿಸಿದ್ದಾರೆ.