ಶನಿವಾರಸಂತೆ, ಜು. 29: ಇಂದು ಬೆಳಗ್ಗಿನ ಜಾವ ದಂಪತಿಗಳಿಬ್ಬರು ವಾಕಿಂಗ್ ತೆರಳಿದ್ದ ಸಂದರ್ಭ ರಸ್ತೆಯಲ್ಲಿ ಆನೆಯೊಂದು ತನ್ನ ಎರಡು ಮರಿಯಾನೆಗಳೊಂದಿಗೆ ಬರುತ್ತಿರುವದನ್ನು ಸ್ವಲ್ಪ ದೂರದಿಂದಲೇ ಗಮನಿಸಿ ಹೆದರಿ ಅಕ್ಕಪಕ್ಕದ ಮನೆಯವರನ್ನು ಕೂಗಿ ಕರೆದ ಘಟನೆ ನಡೆದಿದೆ.
ಇಲ್ಲಿನ ನಿವಾಸಿ, ರವಿ ಎಂಬವರು ತಮ್ಮ ಪತ್ನಿಯೊಂದಿಗೆ ಬೆಳಗ್ಗಿನ ಜಾವ ಬೆಳಕು ಹರಿಯುವ ಮೊದಲೇ ವಾಕಿಂಗ್ ಹೋಗುತ್ತಿರುವಾಗ ದೊಡ್ಡ ಆನೆಯೊಂದು ಎರಡು ಮರಿಯಾನೆಗಳೊಂದಿಗೆ ಬರುತ್ತಿದ್ದ ದೃಶ್ಯ ಗೋಚರಿಸಿದೆ. ಹೆದರಿದ ದಂಪತಿಗಳಿಬ್ಬರು ಪಕ್ಕದ ಮನೆಯೊಂದರ ಜಗಲಿಗೆ ಓಡಿದರು. ಅಷ್ಟರಲ್ಲಿ ಅಲ್ಲಿಗೆ ಬಂದ ಬಾಲಕನೊಬ್ಬ ಆನೆಯನ್ನು ನೋಡಿ ಮನೆಯವರನ್ನು ಕೂಗಿ ಕರೆದ. ಇದನ್ನು ಕೇಳಿದ ಅಕ್ಕಪಕ್ಕದ ಮನೆಯವರು ಎದ್ದು ಬಾಗಿಲು ತೆರೆದು ಮನೆಯೊಳಗಿನಿಂದಲೇ ನೋಡ ತೊಡಗಿದರು.
ರವಿಯ ಪತ್ನಿ ತನ್ನ ಗಂಡನಿಗೆ ಓಡುವಂತೆ ತಿಳಿಸಿದರು. ಅಷ್ಟರಲ್ಲಿ ಆನೆ ಸಮೀಪಕ್ಕೆ ಬಂದು ತಲುಪಿತು. ಆನೆಯ ಪಕ್ಕದಲ್ಲಿ ಇಬ್ಬರು ಮಾವುತರು ಬರುತ್ತಿರುವದು ಕಾಣಿಸಿತು. ಇದು ಸಾಕಾನೆ ಎಂದು ತಿಳಿದ ರವಿ ಧೈರ್ಯದಿಂದ ಮಾವುತರನ್ನು ಮಾತನಾಡಿಸಿದರು. ಮರ ಎಳೆಯಲು ಹೋಗುತ್ತಿರುವದಾಗಿ ತಿಳಿದಾಗ, ಆನೆಯನ್ನು ನೋಡುತ್ತಿದ್ದ ಅಕ್ಕಪಕ್ಕದ ಮನೆಯವರಿಗೆ ಹಾಗೂ ರವಿ ಹಾಗೂ ಪತ್ನಿಗೆ ತಾವು ಬೆಳಿಗ್ಗೆ ಬೆಸ್ತು ಬಿದ್ದ ಬಗ್ಗೆ ತಿಳಿಯಿತು. ಒಳಗೊಳಗೆ ನಗು ಬರುತ್ತಿತ್ತು. ಕಳೆದ ವರ್ಷ ಇದೇ ಸ್ಥಳದಲ್ಲಿ ಎರಡು ಕಾಡಾನೆಗಳನ್ನು ವಾಕಿಂಗ್ ಹೋಗುವವರು ಕಂಡಿದ್ದು, ಬಳಿಕ 15 ದಿವಸಗಳವರೆಗೆ ಈ ರಸ್ತೆಯಲ್ಲಿ ವಾಕಿಂಗ್ ಹೋಗುವದನ್ನೇ ನಿಲ್ಲಿಸಿದ ಘಟನೆ ಎಲ್ಲರಿಗೂ ತಿಳಿದಿತ್ತು. - ನರೇಶ್ಚಂದ್ರ