ಗೋಣಿಕೊಪ್ಪಲು, ಆ. 24: ಅರಣ್ಯ ಹಕ್ಕು ಕಾಯ್ದೆಯನ್ವಯ ಕೊಡಗಿನ ಬೆಳೆಗಾರರ ಕಾಫಿ ತೋಟಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಮಿಕರಾಗಿ ದುಡಿಯುತ್ತಿದ್ದು, ಲೈನ್‍ಮನೆಯಲ್ಲಿ ವಾಸ್ತವ್ಯ ಹೂಡಿರುವ ಬೆಟ್ಟಕುರುಬ, ಜೇನುಕುರುಬ, ಯರವ ಹಾಗೂ ಇತರ ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಜಿಲ್ಲೆಯ ಕಾಫಿ ಬೆಳೆಗಾರರಲ್ಲಿ ತಳಮಳ ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಆದಿವಾಸಿ ಜನಾಂಗವನ್ನು ನೆರೆಯ ಹುಣಸೂರು ತಾಲೂಕು ಹಾಗೂ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಪುನರ್ವಸತಿ ಕಲ್ಪಿಸಲು ಬಿಡೆವು, ಜಿಲ್ಲೆಯ ಅರಣ್ಯ ದಂಚಿನಲ್ಲಿಯೇ ಅರಣ್ಯ ಪೈಸಾರಿ ಅಥವಾ ಕಂದಾಯ ಇಲಾಖೆಯ ಜಾಗವನ್ನು ಗುರುತಿಸಿ ನೀಡು ವಂತಾಗಲಿ ಎಂದು ಬಾಳೆಲೆ ಗ್ರಾ.ಪಂ.ಮಾಜಿ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ, ಕುಟ್ಟ ತಾ.ಪಂ.ಸದಸ್ಯ ಪೆÇಯಿಲಂಗಡ ಪಲ್ವಿನ್‍ಪೂಣಚ್ಚ, ನಾಲ್ಕೇರಿ ಗ್ರಾ.ಪಂ.ಅಧ್ಯಕ್ಷ ಪ್ರಚನ್, ಕೆ.ಬಾಡಗ ಗ್ರಾ.ಪಂ.ಉಪಾಧ್ಯಕ್ಷ ಸಿ.ಡಿ.ಬೋಪಣ್ಣ, ಬಾಳೆಲೆ ಗ್ರಾ.ಪಂ. ಉಪಾಧ್ಯಕ್ಷ ಕೊಕ್ಕೇಂಗಡ ರಂಜನ್, ಬಾಳೆಲೆ ಜಿ.ಪಂ.ಕ್ಷೇತ್ರದ ಜಿ.ಪಂ.ಸದಸ್ಯ ಬಿ.ಎನ್.ಪ್ರಥ್ಯು ಇಲಾಖಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಇದೇ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಅವರು ತಾ.26 ರಂದು ಮಡಿಕೇರಿಗೆ ಆಗಮಿಸುವ ಸಂದರ್ಭ ಮನವಿ ನೀಡಲಾಗುವದು ಎಂದು ತಿಳಿಸಿದರು.

ತಿತಿಮತಿ ನಿರೀಕ್ಷಣಾ ಮಂದಿರದಲ್ಲಿ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‍ಕುಮಾರ್, ಜಿ.ಪಂ.ಸಿಇಓ ಚಾರುಲತಾ ಸೋನಲ್, ತಿತಿಮತಿ ಎಸಿಎಫ್ ಸೂರ್ಯಸೇನ್, ಆನೆಚೌಕೂರು ವನ್ಯ ಜೀವಿ ವಲಯದ ಆರ್‍ಎಫ್‍ಓ ಕಿರಣ್‍ಕುಮಾರ್ ಹಾಗೂ ತಿತಿಮತಿ ಆರ್‍ಎಫ್‍ಓ ಗೋಪಾಲ್ ಸಮ್ಮುಖದಲ್ಲಿ ಜನಪ್ರತಿನಿಧಿಗಳು ಮಹತ್ವದ ಮಾತುಕತೆ ನಡೆಸಿದರು.

ಇದೇ ಸಂದರ್ಭ ಕೆ.ಬಾಡಗ ಗ್ರಾ.ಪಂ.ಉಪಾಧ್ಯಕ್ಷ ಬೋಪಣ್ಣ ಅವರು ಕೊಡಗು ಜಿಲ್ಲೆಯಿಂದ ಆದಿವಾಸಿಗಳನ್ನು ಹೊರಜಿಲ್ಲೆಗೆ ಸ್ಥಳಾಂತರಿಸಿದರೆ ಇಲ್ಲಿನ ಕಾಫಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಅರಣ್ಯದಂಚಿನಲ್ಲಿ ನಿವೇಶನ ಗುರುತಿಸಿ ನಾವೇ ವಸತಿ ಸಮುಚ್ಛಯವನ್ನು ನಿರ್ಮಿಸಿಕೊಡುತ್ತೇವೆ ಎಂದು ಹೇಳಿದರು.

ಬಾಳೆಲೆ ಗ್ರಾ.ಪಂ.ಮಾಜಿ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ ಅವರು, ದೇವನೂರು ವ್ಯಾಪ್ತಿಯ 2/5 ಸರ್ವೆ ನಂ. ನಲ್ಲಿ ಹಾಗೂ ಸುಳುಗೋಡು ಸ.ನಂ.149 ರಲ್ಲಿ ಸುಮಾರು 500 ಎಕರೆ ಪೈಸಾರಿ ಇದ್ದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಆದಿವಾಸಿಗಳು ಹಾಗೂ ಲೈನ್ ಮನೆಯಲ್ಲಿರುವ ಜೇನುಕುರುಬ, ಬೆಟ್ಟಕುರುಬ, ಯರವ ಜನಾಂಗಕ್ಕೆ ಪುನರ್ವಸತಿ ಕಲ್ಪಿಸಲು ಡಿ ನೋಟಿಫಿಕೇಷನ್ ಮಾಡಿಕೊಟ್ಟು ಸಹಕರಿಸಿ ಎಂದು ಮನೋಜ್‍ಕುಮಾರ್ ಅವರಲ್ಲಿ ಮನವಿ ಮಾಡಿದರು. ಇದೇ ಸಂದರ್ಭ ಮಾತನಾಡಿದ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‍ಕುಮಾರ್ ಅವರು ಸ.ನಂ. ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಟ್ಟಿದ್ದು ಕೇಂದ್ರದ ಅನುಮತಿ ಕಡ್ಡಾಯವಾಗಿದೆ ಹಾಗೂ ಡಿ ನೋಟಿಫಿಕೇಷನ್ ಕಷ್ಟಸಾಧ್ಯವಾಗಲಿದೆ ಎಂದು ನುಡಿದರಲ್ಲದೆ, ಜಿಲ್ಲೆಯ ಹಲವೆಡೆ ಕಂದಾಯ ಇಲಾಖೆಯ ಅಧೀನದಲ್ಲಿ ಹಲವಷ್ಟು ಜಾಗಗಳಿದ್ದು, ಅವುಗಳನ್ನು ಗುರುತಿಸಿದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.

ಕುಟ್ಟ ತಾ.ಪಂ. ಸದಸ್ಯ ಪೆÇಯಿಲಂಗಡ ಪಲ್ವಿನ್ ಅವರು ನಾಗರಹೊಳೆ ಗಿರಿಜನರನ್ನು ಯಾವದೇ ಕಾರಣಕ್ಕೆ ಜಿಲ್ಲೆಯ ಹೊರಭಾಗಕ್ಕೆ ಸ್ಥಳಾಂತರ ಮಾಡಬಾರದು, ಮಾಡಿದರೆ ಜಿಲ್ಲೆಯಲ್ಲಿ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭ ಜಿ.ಪಂ. ಸದಸ್ಯ ಬಿ.ಎನ್.ಪ್ರಥ್ಯು ಅವರು ಮುಂದಿನ ಜಿ.ಪಂ.ಸಭೆಯಲ್ಲಿಯೂ ಗಿರಿಜನರ ಪುನರ್ವಸತಿ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಗುವದು, ಅಧಿಕಾರಿಗಳು ಯಾವದೇ ಕಾರಣಕ್ಕೆ ಪುನರ್ವಸತಿ ನೆಪದಲ್ಲಿ ಹುಣಸೂರು ತಾಲೂಕಿನ ಪಂಚವಳ್ಳಿಗೆ ಇಲ್ಲಿನ ಆದಿವಾಸಿಗಳನ್ನು ಸ್ಥಳಾಂತರಿಸದಂತೆ ಮನವಿ ಮಾಡಿದರು. ಅರಣ್ಯ ಪೈಸಾರಿಯಲ್ಲಿ ವಾಸವಿರುವ ಇತರ ಜನಾಂಗಕ್ಕೆ ಪುನರ್ವಸತಿ ಅಸಾಧ್ಯ. ಬೇರೆಡೆಗೆ ವಾಸ್ತವ್ಯ ಬದಲಾಯಿಸಿದ್ದಲ್ಲಿ ರೂ.10 ಲಕ್ಷ ಮೊತ್ತವನ್ನು ನೀಡಲು ಇಲಾಖೆಯಲ್ಲಿ ಅವಕಾಶ ಇದೆ ಎಂದು ಮನೋಜ್‍ಕುಮಾರ್ ಹೇಳಿದರು. ಹುಣಸೂರು ಸಮೀಪ ಪಂಚವಳ್ಳಿ ಪುನರ್ವಸತಿ ಕೇಂದ್ರಕ್ಕೆ ನಾಗರಹೊಳೆಯ ಸುಮಾರು 200 ಆದಿವಾಸಿಗಳು ತೆರಳಲು ಸಿದ್ಧರಾಗಿದ್ದು, ಇಲಾಖೆ ವತಿಯಿಂದ ತಡೆಯಲು ಅಸಾಧ್ಯ ಎಂದು ಹೇಳಿದರು.

ಈಗಾಗಲೇ ಸೋಮವಾರಪೇಟೆ ತಾಲೂಕಿನಲ್ಲಿ ಸುಮಾರು 464 ಎಕರೆ ಪ್ರದೇಶವನ್ನು ಆದಿವಾಸಿಗಳ ಪುನರ್ವಸತಿಗೆ ಗುರುತಿಸಲಾಗಿದ್ದು, ತಿತಿಮತಿ ಸಮೀಪ ಮರದ ಡಿಪೆÇೀ ಸಮೀಪವೂ ಸುಮಾರು 56 ಎಕರೆ ಪ್ರದೇಶವನ್ನು ಡಿ ನೋಟಿಫಿಕೇಷನ್ ಗಾಗಿ ಗುರುತಿಸಲಾಗಿದೆ. ಸ್ವಯಂ ಪ್ರೇರಿತರಾಗಿ ಬರುವ ಆದಿವಾಸಿಗಳಿ ಅಲ್ಲಿ ಅವಕಾಶ ಕಲ್ಪಿಸಲಾಗುವದು ಎಂದೂ ಮಾಹಿತಿ ನೀಡಿದರು.

ನಾಗರಹೊಳೆ ಸರಹದ್ದಿನಲ್ಲಿ ಅರಕೇರಿ ಎಂಬಲ್ಲಿ 1942 ರಿಂದಲೂ ಪರಿಶಿಷ್ಟ ಜಾತಿ ಹಾಗೂ ಇತರೆ ಜನಾಂಗ ವಾಸಮಾಡುತ್ತಿದ್ದು ಜಮಾಬಂದಿ ದಾಖಲೆ ನೀಡಲಾಗಿದೆ. ಆದರೆ, ಆರ್‍ಟಿಸಿ ಯಲ್ಲಿ ಫಾರೆಸ್ಟ್ ಎಂದು ಬರುತ್ತಿದ್ದು ಅಲ್ಲಿ ತಲಾ ತಲಾಂತರದಿಂದ ನೆಲೆಸಿದ ನಿವಾಸಿಗಳಿಗೆ ಅನ್ಯಾಯವಾಗಿದೆ. ಅವರನ್ನು ಅಲ್ಲಿಯೇ ನೆಲೆನಿಲ್ಲಲು ಅವಕಾಶ ಕಲ್ಪಿಸಬೇಕು ಎಂದು ವಿನು ಉತ್ತಪ್ಪ ಅವರು ಮನೋಜ್‍ಕುಮಾರ್ ಹಾಗೂ ಜಿ.ಪಂ. ಸಿಇಓ ಚಾರುಲತಾ ಸೋನಲ್ ಅವರನ್ನು ತಮ್ಮ ಬೇಡಿಕೆ ಮುಂದಿಟ್ಟರು.

ಸುಮಾರು 162 ಎಕರೆ ಪ್ರದೇಶದಲ್ಲಿ ಯಾವದೇ ವನ್ಯ ಜೀವಿಗಳು ಕಂಡುಬರುತ್ತಿಲ್ಲ, ಸುಳುಗೋಡು-ರಾಜಪುರ ರಸ್ತೆ, ಸುಳುಗೋಡು-ಮಳಲುಕೋಟೆ ರಸ್ತೆ ಹಾಗೂ ರಾಜಪುರ-ಬ್ಯಾಟರಾಯನಕೊಪ್ಪ ರಸ್ತೆ ಅಭಿವೃದ್ಧಿಗೊಂಡಿದ್ದು ಪುನರ್ವಸತಿಗೆ ಉತ್ತಮ ಪ್ರದೇಶವಾಗಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಹಸು ಕಳೆದು ಕೊಂಡವರ ಅಳಲು

ಇತ್ತೀಚೆಗೆ ನಿಟ್ಟೂರು ಗ್ರಾ.ಪಂ.ವ್ಯಾಪ್ತಿಯ ಕೊಟ್ಟಗೇರಿಯಲ್ಲಿ ಹುಲಿಯೊಂದು ಹಸುವನ್ನು ಭಕ್ಷಿಸಿದ್ದು ಪರಿಹಾರ ಮೊತ್ತನೀಡುವದಾಗಿ ನಾಗರಹೊಳೆ ಎಸಿಎಫ್ ಲಿಖಿತವಾಗಿ ಪತ್ರ ನೀಡಿದ್ದಾರೆ. ಸುಮಾರು ರೂ.30 ಸಾವಿರ ಮೊತ್ತ ತನಗೆ ಸಿಗಬೇಕಿದ್ದು ಈವರೆಗೆ ಕಿಂಚಿತ್ತೂ ಪರಿಹಾರ ಸಿಗಲಿಲ್ಲ ಎಂದು ರೈತ ರಘು ಅವರು ಇದೇ ಸಂದರ್ಭ ಅರಣ್ಯ ಇಲಾಖಾಧಿಕಾರಿಗಳಲ್ಲಿ ತಮ್ಮ ಅಳಲು ತೋಡಿಕೊಂಡರು. ಇದೇ ಸಂದರ್ಭ್ ನಾಗರಹೊಳೆ ಸರಹದ್ದಿನಲ್ಲಿ ಹುಲಿ ಸಂರಕ್ಷಿತ ಯೋಜನೆಗೆ ಒಳಪಡದ ಜಾಗವಿದೆಯೇ ಎಂದು ನಕ್ಷೆಯನ್ನು ಪರಿಶೀಲನೆ ಮಾಡಲಾಯಿತು.

ವರದಿ;- ಟಿ.ಎಲ್.ಶ್ರೀನಿವಾಸ್