ಮಡಿಕೇರಿ, ಜು. 21: ಆದಾಯ ತೆರಿಗೆ ಇಲಾಖೆಯಿಂದ ನೂತನವಾಗಿ ಜಾರಿ ಮಾಡಲಾದ ಅಘೋಷಿತ ಆದಾಯವನ್ನು ಘೋಷಿಸುವ ಯೋಜನೆಯ ಮಾಹಿತಿಗಳನ್ನು ನೀಡುವದಕ್ಕಾಗಿ ತಾ. 22 ರಂದು ಸಂಜೆ 5.45 ಗಂಟೆಗೆ ರೋಟರಿ ಮಡಿಕೇರಿಯ ಸಹಯೋಗದೊಂದಿಗೆ ರೋಟರಿ ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ಮಾಹಿತಿ ಸಭೆಯನ್ನು ಏರ್ಪಡಿಸಲಾಗಿದೆ.

ಈ ಯೋಜನೆಯಡಿ, ಯಾವದೇ ವರ್ಷದ ಅಘೋಷಿತ ಆದಾಯ ಅಥವಾ ತೆರಿಗೆ ಪಾವತಿ ಮಾಡದೇ ಇರುವ ಹಣದಿಂದ ಮಾಡಿಟ್ಟ ಆಸ್ತಿಗಳ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಸೆ. 30 ರೊಳಗಾಗಿ ನೀಡಬಹುದಾಗಿದೆ. ಅಂತಹ ಆದಾಯ ಘೋಷಿಸಿ, ಕಟ್ಟಬೇಕಾದ ತೆರಿಗೆಯನ್ನು ನ. 30ರ ಒಳಗಾಗಿ ಪಾವತಿಸಿದವರ ಮೇಲೆ, ಆದಾಯ ತೆರಿಗೆ ಇಲಾಖೆಯಿಂದ ದಂಡ, ಶಿಕ್ಷೆ ಇತ್ಯಾದಿ ಕ್ರಮಗಳನ್ನು ನಡೆಸಲಾಗುವದಿಲ್ಲ. ಅಲ್ಲದೆ, ಆದಾಯ ಘೋಷಣೆ ಮಾಡಿದವರ ಮಾಹಿತಿಯ ಗೌಪ್ಯತೆಯನ್ನೂ ಕಾಪಾಡಲಾಗುವದು.

ಸಾರ್ವಜನಿಕರಿಗೆ ಈ ಯೋಜನೆಯ ಹೆಚ್ಚಿನ ಮಾಹಿತಿಗಳನ್ನು ನೀಡುವ ಸಲುವಾಗಿ ಈ ಸಭೆಯನ್ನು ಏರ್ಪಡಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನುರಿತ ತಜ್ಞರಿಂದ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿ ಆರ್. ಎನ್. ನಾರಾಯಣ ನಾಯರ್ ತಿಳಿಸಿದ್ದಾರೆ.