ಮಡಿಕೇರಿ, ಜು. 8: ದಕ್ಷ ಪೊಲೀಸ್ ಅಧಿಕಾರಿ ಎಂ.ಕೆ. ಗಣಪತಿ ಅವರದ್ದು ಆತ್ಮಹತ್ಯೆಯಲ್ಲ. ಇದು ಸರಕಾರ ಮಾಡಿದ ಕೊಲೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಆರೋಪಿಸಿದ್ದಾರೆ.

ಇಲ್ಲಿನ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ಅಲ್ಲಿಗೆ ಆಗಮಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಒತ್ತಡದಿಂದ ಕೆಲಸ ಮಾಡುವಂತಾಗಿದೆ. ಇತ್ತೀಚೆಗೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪೊಲೀಸರು ಪ್ರತಿಭಟನೆಗೆ ಮುಂದಾದ ಸಂದರ್ಭ ಅವರುಗಳ ಮೇಲೆ ಒತ್ತಡ ಹೇರಿ ಪ್ರತಿಭಟನೆಯನ್ನು ಹತ್ತಿಕ್ಕಲಾಗಿದೆ ಎಂದು ಹೇಳಿದರು. ಗಣಪತಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆಂದು ಹೇಳಲಾಗುತ್ತಿದೆ. ಆದರೆ ದಶಕಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಅವರು ದಿಢೀರನೆ ಖಿನ್ನತೆಗೆ ಒಳಗಾಗಿದ್ದಾರೆ ಎಂದರೆ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ. ಕೆಳವರ್ಗದ ಪೊಲೀಸ್ ಅಧಿಕಾರಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದರೆ ಸರಕಾರ ಅವರುಗಳ ಶವವನ್ನು ಮನೆಗೆ ಕಳುಹಿಸಿಕೊಡುತ್ತಿದೆ ಎಂದು ಹೇಳಿದರು.

ಸಿಐಡಿ ಸರಕಾರದ ಅಧೀನದಲ್ಲಿ ಕೆಲಸ ಮಾಡುವ ಸಂಸ್ಥೆಯಾಗಿದ್ದು, ಇದರಿಂದ ನ್ಯಾಯ ಸಿಗುವದು ಸಂಶಯ; ಪೊಲೀಸ್ ಇಲಾಖೆಯಲ್ಲಿ ಸುಧಾರಣೆಯಾಗಬೇಕಾದರೆ, ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ಮ್ಯಾನೇಜ್‍ಮೆಂಟ್ ಎಕ್ಸ್‍ಪಟ್ರ್ಸ್‍ಗಳು ಸಾಮಾಜಿಕ ವಿಜ್ಞಾನಿಗಳು, ಮನೋಶಾಸ್ತ್ರಜ್ಞರು ಆಡಳಿತದ ಬಗ್ಗೆ ಅಧ್ಯಯನ ಮಾಡಿರುವ ಬುದ್ದಿ ಜೀವಿಗಳನ್ನು ಒಳಗೊಂಡ ಸಮಿತಿ ರಚಿಸುವದು ಅಗತ್ಯವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.

ಸರಕಾರ ಕೂಡಲೇ ಎಚ್ಚೆತ್ತು ಸಾವಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಪ್ರಕರಣವನ್ನು ರಾಜ್ಯದ ಆರೂವರೆ ಕೋಟಿ ಜನರು ನೋಡುತ್ತಿದ್ದಾರೆ. ಜನರ ಮೇಲೆ ಗೂಬೆ ಕೂರಿಸಲು ಯತ್ನ ಮಾಡಬಾರದೆಂದು ಅವರು ಹೇಳಿದರು.