ಮಡಿಕೇರಿ, ಜು. 15 : ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಿರುವದು ಸಮಾಜ ಘಾತುಕ ಕೃತ್ಯ ಎಂದು ಆರೋಪಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಉನ್ನತ ಹುದ್ದೆಯಲ್ಲಿದ್ದ ಪೊಲೀಸ್ ಅಧಿಕಾರಿ ಒಬ್ಬರು ಆತ್ಮಹತ್ಯೆಗೆ ಶರಣಾಗುವದು ಖಂಡನೀಯ ಕ್ರಮವೆಂದು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರವಿದ್ದಾಗಲೇ ಗಣಪತಿ ಅವರನ್ನು ಅಮಾನತು ಮಾಡಲಾಗಿತ್ತು. ಸಚಿವ ಕೆ.ಜೆ.ಜಾರ್ಜ್ ಅವರಿಂದ ಕಿರುಕುಳ ಆಗಿದ್ದರೆ ಜಾರ್ಜ್ ಅವರು ಗೃಹ ಖಾತೆಯಲ್ಲಿ ದ್ದಾಗಲೇ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಈಗ ಯಾಕೆ ಮಾಡಿ ಕೊಂಡರು ಎಂದು ಪ್ರಶ್ನಿಸಿದರು. ಮಂಗಳೂರು ಡಿವೈಎಸ್ಪಿಯಾದ ನಂತರ ಎಲ್ಲಾ ವ್ಯವಸ್ಥೆ ಚೆನ್ನಾಗಿದೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದ ಗಣಪತಿ ಅವರು ದಿಢೀರ್ ಆಗಿ ಆತ್ಮಹತ್ಯೆ ಮಾಡಿಕೊಳ್ಳಲು ಮನೋವ್ಯಾಕುಲದಿಂದ ನರಳುತ್ತಿದ್ದುದ್ದೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಗಣಪತಿ ಅವರು ಹೆಸರಿಸಿರುವ ಮೂವರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಪಟ್ಟಭದ್ರ ಹಿತಾಸಕ್ತಿಗಳು ಒತ್ತಾಯಿಸುತ್ತಿದ್ದು, ಜನಸೇವೆ ಮಾಡುವ ಬದಲು ಕೊಚ್ಚೆಯಲ್ಲಿ ಮೀನು ಹಿಡಿಯುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
174 ಸೆಕ್ಷನ್ ಪ್ರಕಾರ ಈಗಾಗಲೇ ತನಿಖೆ ಆರಂಭಗೊಂಡಿದ್ದು, ಇದರ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ಎಂದು ತಿಳಿದು ಬಂದಲ್ಲಿ ಎಫ್ಐಆರ್ ದಾಖಲಿಸಲು ಅವಕಾಶವಿದೆ. ಆದರೆ 174ರಡಿಯಲ್ಲೇ ತನಿಖೆಯನ್ನು ಕೈಗೊಳ್ಳಲು ಬಿಡದೆ ಅರ್ಥಹೀನ ಆಂದೋಲನದ ಮೂಲಕ ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಎ.ಕೆ. ಸುಬ್ಬಯ್ಯ ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವದಕ್ಕಾಗಿಯೇ ಕೆಲವರು ವ್ಯಂಗ್ಯ ಮನೋರಂಜನೆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಎಂ.ಕೆ. ಗಣಪತಿ ಹಾಗೂ ಮತ್ತೊಬ್ಬ ಡಿವೈಎಸ್ಪಿ ಕಲ್ಲಪ್ಪ ಅವರು ಕೇಸರೀಕರಣಗೊಂಡಿದ್ದರೆಂದು ಆರೋಪಿಸಿದ ಅವರು ಕೇಸರೀಕರಣಗೊಂಡ ಅಧಿಕಾರಿಗಳೆಲ್ಲಾ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಗಣಪತಿ ಅವರ ಆತ್ಮಹತ್ಯೆಗೆ ಸಂಘ ಪರಿವಾರವೇ ನೇರ ಹೊಣೆ ಎಂದು ಆರೋಪಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಬಾಡೂಟ
ಜಿಲ್ಲಾ ಉಸ್ತುವಾರಿ ಸಚಿವರು ತಿಥಿ ಊಟ ಮಾಡಿದ್ದಾರೆ ಎಂದು ಟೀಕಿಸುತ್ತಿರುವವರೇ ಆಹೋ ರಾತ್ರಿ ಧರಣಿ ಸತ್ಯಾಗ್ರಹದ ಸಂದರ್ಭ ಬಾಡೂಟ ಮಾಡುತ್ತಿದ್ದಾರೆ ಎಂದು ಸುಬ್ಬಯ್ಯ ಟೀಕಿಸಿದರು.
ತಮ್ಮನ್ನು ಗಡಿಪಾರು ಮಾಡುವಂತೆ ಒತ್ತಾಯಿಸುತ್ತಿರುವವರು ಮಾನಸಿಕ ರೋಗಿಗಳೆಂದು ವ್ಯಂಗ್ಯವಾಡಿದ ಸುಬ್ಬಯ್ಯ ಮಡಿಕೇರಿಯಲ್ಲೊಂದು ಹುಚ್ಚಾಸ್ಪತ್ರೆಯನ್ನು ತೆರೆಯಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಳಿ ಮನವಿ ಮಾಡುವದಾಗಿ ತಿಳಿಸಿದರು. ಮಾನಸಿಕ ಸ್ಥಿಮಿತ ಕಳೆದುಕೊಂಡು ಹುಚ್ಚರಂತೆ ಹೇಳಿಕೆ ನೀಡುತ್ತಿರುವವರ ರೋಗಕ್ಕೆ ಔಷಧಿ ಇಲ್ಲದಂತಾಗಿದೆ ಎಂದು ಸುಬ್ಬಯ್ಯ ಟೀಕಿಸಿದರು.