ವೀರಾಜಪೇಟೆ, ಜು. 26: ಸಮಾಜದಲ್ಲಿ ಮೊದಲು ಕಾಣುವದೇ ಆಟೋ ಚಾಲಕರು. ಇದರಿಂದ ಆಟೋ ಚಾಲನೆ ಸಂದರ್ಭ ಮದ್ಯ ಸೇವನೆ ಮಾಡದೆ ಸಾರ್ವಜನಿಕ ರೊಂದಿಗೆ ಸೌಜನ್ಯದಿಂದ ವರ್ತಿಸಿ ಪ್ರಯಾಣಿಕರ ವಿಶ್ವಾಸಗಳಿಸು ವಂತಾಗಬೇಕು ಎಂದು ನಗರ ಅಪರಾಧ ವಿಭಾಗದ ಸಬ್ ಇನ್ಸ್‍ಪೆಕ್ಟರ್ ಎಂ.ಡಿ. ಅಪ್ಪಾಜಿ ಹೇಳಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ನೂತನ ಕಚೇರಿ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅಪ್ಪಾಜಿ ಅವರು, ಚಾಲಕರುಗಳಿಗೆ ಶಿಸ್ತುಪಾಲನೆ ಮುಖ್ಯವಾಗಿದ್ದು ದಾಖಲಾತಿಗಳಿಲ್ಲದೆ ಆಟೋ ಚಾಲನೆ ಮಾಡಬಾರದು. ಘಟನೆಗಳು ನಡೆದಾಗ ಆಟೋ ರಿಕ್ಷಾಗಳ ಮೂಲ ದಾಖಲಾತಿಗಳೇ ಮುಖ್ಯವಾಗಿರುತ್ತದೆ ಎಂದರು.

ಸಂಘದ ಮಾಜಿ ಅಧ್ಯಕ್ಷ ಜಿ.ಜಿ. ಮೋಹನ್ ಮಾತನಾಡಿ, ಆಟೋ ಚಾಲಕರ ಸೇವೆ ಅಮೂಲ್ಯವಾಗಿದ್ದು ಚಾಲಕರು ಸಮಾಜಕ್ಕೆ ಹೊಂದಿಕೊಂಡಿರುವಂತಾಗಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಆಟೋ ಚಾಲಕರ ಸಂಘದ ಅಧ್ಯಕ್ಷ ಎನ್.ಎನ್. ಶಿವು ಮಾತನಾಡಿ, ಸಂಘದಲ್ಲಿ ಹೆಚ್ಚಿನ ಸದಸ್ಯರುಗಳನ್ನು ನೋಂದಾಯಿಸಿಕೊಂಡು ಸಂಘದ ವತಿಯಿಂದ ಅನೇಕ ಕಾರ್ಯಕ್ರಮ ಗಳನ್ನು ರೂಪಿಸಿ ಚಾಲಕರ ಸಹಕಾರದಿಂದ ಸಮಾಜ ಸೇವೆಗೆ ಆದ್ಯತೆ ನೀಡುವಂತಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಹಾಜರಿದ್ದ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಕರುಂಬಯ್ಯ, ಗೌಡ ಸಮಾಜದ ಉಪಾಧ್ಯಕ್ಷ ಚಂದ್ರ ಶೇಖರ್, ನಗರ ಠಾಣೆಯ ಎ.ಎಸ್.ಐ. ಶಿವಪ್ಪ ಅವರು ಸಭೆಯಲ್ಲಿ ಮಾತನಾಡಿದರು. ಎಂ.ಎಂ. ಇಸ್ಮಾಯಿಲ್ ಸ್ವಾಗತಿಸಿ, ನಿರೂಪಿಸಿದರು.