ಕುಶಾಲನಗರ, ಸೆ. 29: ಆಟೋ ಚಾಲಕನೊಬ್ಬನ ಮೇಲೆ ಹಲ್ಲೆ ನಡೆಸಿ ಚೂರಿಯಿಂದ ಇರಿದು ಆಟೋ ರಿಕ್ಷಾದೊಂದಿಗೆ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರ ತಂಡ 5 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾ. 8 ರಂದು ಪ್ರಕರಣ ನಡೆದಿದ್ದು ಕುಶಾಲನಗರದ ಆಟೋ ಚಾಲಕ ಮಹಮ್ಮದ್ ಎಂಬವರ ಆಟೋ ಏರಿದ ಕೆಲವು ದುಷ್ಕರ್ಮಿಗಳು ಪ್ರಯಾಣಿಕರ ಸೋಗಿನಲ್ಲಿ ಬಸವನತ್ತೂರು ಬಳಿ ಚಾಲಕನ ಮೇಲೆ ಏಕಾಏಕಿ ಚಾಕುವಿನಿಂದ ಧಾಳಿ ನಡೆಸಿದ ಘಟನೆ ಹಿನ್ನೆಲೆಯಲ್ಲಿ ಕುಶಾಲನಗರದ ಮಧು, ರವಿ, ಆಕಾಶ್, ಯೋಗೇಶ್ ಮತ್ತು ಉಮೇಶ್ ಎಂಬವರುಗಳನ್ನು ಬಂಧಿಸಿದ್ದಾರೆ.
8 ರಂದು ಸಂಜೆ ಮಹಮ್ಮದ್ ಅವರ ಆಟೋ (ಕೆಎ.12.9680) ಏರಿದ ಆರೋಪಿಗಳು ಬಸವನತ್ತೂರು ಬಳಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಂತರ ದುಷ್ಕರ್ಮಿಗಳು ಆಟೋದೊಂದಿಗೆ ಪರಾರಿ ಯಾಗುತ್ತಿದ್ದ ಸಂದರ್ಭ ಹಾರಂಗಿ ರಸ್ತೆಯಲ್ಲಿ ಪಾದಚಾರಿಗಳಿಗೆ ಡಿಕ್ಕಿಪಡಿಸಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್, ಡಿವೈಎಸ್ಪಿ ಟಿ.ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳ ಪತ್ತೆಗೆ ಜಿಲ್ಲಾ ಅಪರಾಧ ಪತ್ತೆದಳಕ್ಕೆ ನಿರ್ದೇಶನ ನೀಡಿದ್ದರು. ಡಿಸಿಐಬಿ ಇನ್ಸ್‍ಪೆಕ್ಟರ್ ಲಿಂಗಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಕುಶಾಲನಗರದಲ್ಲಿ ನಡೆದ ಹತ್ಯೆ ಪ್ರಕರಣವೊಂದಕ್ಕೆ ಪ್ರತಿಕಾರವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಆರೋಪಿಗಳಲ್ಲಿ ಯೋಗೇಶ್ ಎಂಬಾತ ಕೆಆರ್ ಪೇಟೆ ನಿವಾಸಿಯಾಗಿದ್ದು, ಉಳಿದಂತೆ ನಾಲ್ವರು ಕುಶಾಲನಗರ ನಿವಾಸಿಗಳಾಗಿದ್ದಾರೆ. ಘಟನೆ ಸಂದರ್ಭ ಆರೋಪಿಗಳಲ್ಲಿ ರವಿ ಎಂಬಾತನ ಕೈಮುರಿತಕ್ಕೆ ಒಳಗಾಗಿದ್ದು, ಇನ್ನುಳಿದಂತೆ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆರೋಪಿಗಳು ನೆರೆ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆದಿರುವ ಮಾಹಿತಿಗಳು ದೊರಕಿವೆ. ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.