ಮಡಿಕೇರಿ, ನ. 30: ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಮರ ಸಾರಿದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದ ಪರವಾಗಿ ನಿಂತಿರುವ ಜನಸಾಮಾನ್ಯರು ಕಾಂಗ್ರೆಸ್‍ನ ಆಕ್ರೋಶದ ದಿನಕ್ಕೆ ತಣ್ಣೀರೆರಚಿದ್ದಾರೆ ಎಂದು ಜಿಲ್ಲಾ ಬಿಜೆಪಿ ವ್ಯಂಗ್ಯವಾಡಿದೆ.

ಪತ್ರಿಕಾ ಹೇಳಿಕೆ ನೀಡಿರುವ ಬಿಜೆಪಿಯ ಜಿಲ್ಲಾ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ, ಪ್ರಧಾನಮಂತ್ರಿಗಳು ದೇಶ ಹಾಗೂ ಜನಸಾಮಾನ್ಯರನ್ನು ಭ್ರಷ್ಟ ವ್ಯವಸ್ಥೆಯಿಂದ ಪಾರು ಮಾಡುವದಕ್ಕಾಗಿ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿರುವ ಕ್ರಮಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದರೂ ಕಾಂಗ್ರೆಸ್ ಹಾಗೂ ಇತರ ಪ್ರಾದೇಶಿಕ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವದು ಅತ್ಯಂತ ಖಂಡನೀಯ ಎಂದು ತಿಳಿಸಿದ್ದಾರೆ.

ಭಾರತ್ ಬಂದ್‍ಗೆ ಕರೆ ನೀಡಿದ್ದ ಕಾಂಗ್ರೆಸ್ ಪಕ್ಷ ಜನ ಬೆಂಬಲ ದೊರೆಯುವದಿಲ್ಲ ಎನ್ನುವ ಮುನ್ಸೂಚನೆ ಅರಿತು ಆಕ್ರೋಶದ ದಿನ ಎನ್ನುವ ನಾಟಕವಾಡಿದೆ. ಕಾಂಗ್ರೆಸ್‍ನ ರಾಜಕಾರಣಕ್ಕೆ ಇಡೀ ದೇಶ ಮಾತ್ರವಲ್ಲದೆ ಕೊಡಗು ಜಿಲ್ಲೆಯಲ್ಲೂ ಜನರು ತಕ್ಕ ಪಾಠ ಕಲಿಸಿದ್ದಾರೆ. ದೇಶವನ್ನು ಸುದೀರ್ಘ ಕಾಲ ಆಳಿದ ಕಾಂಗ್ರೆಸ್‍ನ ಮಂದಿ ಜನಹಿತಕ್ಕಾಗಿ ಆರ್ಥಿಕ ಕ್ಷೇತ್ರದಲ್ಲಿ ಯಾವದೇ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡದೆ ಶ್ರೀಮಂತರು ಶ್ರೀಮಂತರಾಗಿಯೇ ಉಳಿಯುವಂತೆ ನೋಡಿಕೊಂಡಿದ್ದಾರೆ. ಅಲ್ಲದೆ ಭ್ರಷ್ಟರಿಗೆ ಪರೋಕ್ಷವಾಗಿ ಬೆಂಬಲ ನೀಡಿ ಬಂಡವಾಳ ಶಾಹಿಗಳ ಪರ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ, ಇದೇ ಕಾರಣಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದಿದ್ದರೂ ಆರ್ಥಿಕ ಅಸಮತೋಲನ ದೇಶವನ್ನು ಕಾಡುತ್ತಿದೆ. ಪ್ರತಿಭಟನೆಗೆ ಹಣ ನೀಡಿ ಜನ ಸೇರಿಸುವ ದುಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವಿದ್ದು, ಇದೂ ಕೂಡ ಭ್ರಷ್ಟಾಚಾರದ ಇನ್ನೊಂದು ಮುಖವಾಗಿದೆ ಎಂದು ಸುಬ್ರಮಣ್ಯ ಉಪಾಧ್ಯಾಯ ಟೀಕಿಸಿದರು.

ಕಪ್ಪು ಹಣ ದಂಧೆಕೋರರಿಂದ ದೇಶದ ಬಡವರ್ಗ ಇಂದು ಸಂಕಷ್ಟವನ್ನು ಎದುರಿಸುವಂತಾಗಿದ್ದು, ಜನಸಾಮಾನ್ಯರಿಗೆ ನ್ಯಾಯ ಒದಗಿಸುವದಕ್ಕಾಗಿ ಪ್ರಧಾನಿ ನರೇಂದ್ರಮೋದಿ ಅವರು ತೆಗೆದುಕೊಂಡ ದಿಟ್ಟ ಕ್ರಮದಿಂದ ಭ್ರಮನಿರಸನಗೊಂಡಿರುವ ಕಾಂಗ್ರೆಸ್ ಆಕ್ರೋಶ ದಿನದ ಆಚರಣೆಯಲ್ಲೂ ಸೋಲನ್ನು ಅನುಭವಿಸುವ ಮೂಲಕ ಅಪಹಾಸ್ಯಕ್ಕೆ ಒಳಗಾಗಿದೆ ಎಂದು ಟೀಕಿಸಿದ್ದಾರೆ. ಇನ್ನು ಮುಂದೆಯಾದರೂ ಕಾಂಗ್ರೆಸ್ಸಿಗರು ಸ್ವಜನ ಪಕ್ಷಪಾತ ಮತ್ತು ಕ್ಷುಲ್ಲಕ ರಾಜಕಾರಣ ಮಾಡುವದನ್ನು ಬಿಟ್ಟು ದೇಶದ ಹಿತದೃಷ್ಟಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೋರಾಟಗಳನ್ನು ನಡೆಸಲಿ ಎಂದು ಅವರು ಒತ್ತಾಯಿಸಿದ್ದಾರೆ.

ಭ್ರಷ್ಟಾಚಾರವನ್ನು ತೊಲಗಿಸುವ ದೃಷ್ಟಿಯಿಂದ ಪ್ರಧಾನಮಂತ್ರಿಗಳು ನಗದು ರಹಿತ ಸಮಾಜ ನಿರ್ಮಾಣದ ಪಣ ತೊಟ್ಟಿದ್ದು, ಈ ನಿಟ್ಟಿನಲ್ಲಿ ಕೊಡಗಿನ ಯುವ ಸಮೂಹ ಕೂಡ ಕೈಜೋಡಿಸಬೇಕೆಂದು ಸುಬ್ರಮಣ್ಯ ಉಪಾಧ್ಯಾಯ ಕರೆ ನೀಡಿದ್ದಾರೆ.