ಮಡಿಕೇರಿ, ಡಿ. 4: ರೂ. 500 ಹಾಗೂ ರೂ. 1000 ಮುಖಬೆಲೆಯ ನೋಟ್ ನಿಷೇಧದ ಬಳಿಕ ನಗದು ರಹಿತ ಹಣದ ವಹಿವಾಟಿನ ಉದ್ದೇಶದಿಂದ ‘ಡಿಪಾರ್ಟ್‍ಮೆಂಟ್ ಆಫ್ ಫೈನಾನ್ಸ್ ಸರ್ವೀಸ್' (ಡಿ.ಎಫ್.ಎಸ್.)ನ ನಿರ್ದೇಶನದಂತೆ ಬ್ಯಾಂಕ್ ಖಾತೆ ಹೊಂದಿಲ್ಲದವರನ್ನು ಖಾತೆ ತೆರೆಯುವಂತೆ ಮಾಡುವ ಕೆಲಸ ಆಂದೋಲನದ ರೂಪದಲ್ಲಿ ನಡೆಯುತ್ತಿದೆ. ಆರ್.ಟಿ.ಐ.ನ ಮಾರ್ಗಸೂಚಿಯಂತೆ ಈ ಕೆಲಸವನ್ನು ನಿರ್ವಹಿಸಲಾಗುತ್ತಿದ್ದು, ಜಿಲ್ಲೆಯಲ್ಲೂ ಆಯಾ ವಿಭಾಗದ ಬ್ಯಾಂಕ್‍ಗಳಲ್ಲಿ ಖಾತೆ ತೆರೆಯಲು ವಿಶೇಷ ಕ್ಯಾಂಪ್ ನಡೆಸಲಾಗುತ್ತಿದೆ. ಲೀಡ್ ಬ್ಯಾಂಕ್‍ನಿಂದ ಎಲ್ಲಾ ಬ್ಯಾಂಕ್‍ಗಳಿಗೆ ಈ ಸೂಚನೆ ನೀಡಲಾಗಿದೆ.

ಬಹುತೇಕ ಅಸಂಘಟಿತ ಕಾರ್ಮಿಕರು ಬ್ಯಾಂಕ್ ಖಾತೆ ಹೊಂದಿಲ್ಲ. ಸಂಘಟಿತ ಕಾರ್ಮಿಕರು ಸಾಮಾನ್ಯವಾಗಿ ಖಾತೆ ಹೊಂದಿದ್ದು, ಇವರ ಖಾತೆಗೆ ವೇತನ ಪಾವತಿ ಸುಲಭವಾಗಿದೆ. ಆದರೆ ಅಸಂಘಟಿತ ಕಾರ್ಮಿಕರು, ಕಟ್ಟಡ ಕಾರ್ಮಿಕರಿಗೆ ಬ್ಯಾಂಕ್ ಖಾತೆ ಇಲ್ಲ. ಈ ಹಿನ್ನೆಲೆಯಲ್ಲಿ ಅಂತಹ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಸ್ಥಳಕ್ಕೆ ತೆರಳಿ ಖಾತೆ ತೆರೆಯುವಂತೆ ಮಾಡಲಾಗುತ್ತಿದೆ. ಖಾತೆ ತೆರೆದ ಬಳಿಕ ಸಂಬಂಧಿಸಿದವರು ಇವರಿಗೆ ನೀಡಬೇಕಾದ ವೇತನವನ್ನು ಚೆಕ್ ಮೂಲಕ ಅವರ ಖಾತೆಗೆ ಹಸ್ತಾಂತರಿಸಬಹುದಾಗಿದೆ. ಇದಲ್ಲದೆ ಪ್ರಸ್ತುತ ಒಬ್ಬ ವ್ಯಕ್ತಿ (ಬೆಳೆಗಾರ ಅಥವಾ ಮಾಲೀಕರಾಗಿರಬಹುದು) ವಾರಕ್ಕೆ ರೂ. 24 ಸಾವಿರ ನಗದನ್ನು ಮಾತ್ರ ಡ್ರಾ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಕೆಲಸಗಾರರಿಗೆ ಅಗತ್ಯಕ್ಕೆ ತಕ್ಕಂತೆ ಲಕ್ಷಾಂತರ ಹಣವನ್ನು ನೀಡಬೇಕಾಗಿದೆ. ನಗದು ಹಣದ ಲಭ್ಯತೆ ಕಡಿಮೆ ಇರುವದು ಹಾಗೂ ವಾರಕ್ಕೆ ರೂ. 24 ಸಾವಿರ ಮಾತ್ರ ಡ್ರಾ ಮಾಡಲು ಅವಕಾಶ ಇರುವದರಿಂದ ಸಮಸ್ಯೆಯಾಗುತ್ತಿದೆ. ಬ್ಯಾಂಕ್ ಖಾತೆ ಇದ್ದಲ್ಲಿ ಖಾತೆಗೆ ಹಣ ಟ್ರಾನ್ಸ್‍ಫರ್ ಮಾಡಲು ಸುಲಭವಾಗಲಿದೆ. ಈ ನಿಟ್ಟಿನಲ್ಲಿ ಲೀಡ್‍ಬ್ಯಾಂಕ್‍ನಿಂದ ಇತರ ಬ್ಯಾಂಕ್‍ಗಳಿಗೆ ಸೂಚನೆ ನೀಡಲಾಗಿದೆ ಎಂದು ಲೀಡ್ ಬ್ಯಾಂಕ್‍ನ ಜಿಲ್ಲಾ ವ್ಯವಸ್ಥಾಪಕ ಕೆ.ಎ. ದೇವಯ್ಯ ತಿಳಿಸಿದ್ದಾರೆ.

ಇದರೊಂದಿಗೆ ಕಾರ್ಮಿಕ ಇಲಾಖೆಯಿಂದ ತೋಟ ಮಾಲೀಕರು, ಇತರ ಉದ್ದಿಮೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರ ಮಾಹಿತಿಯನ್ನು ಲೀಡ್ ಬ್ಯಾಂಕ್‍ನ ಮೂಲಕ ಸಂಗ್ರಹಿಸಲಾಗಿದೆ. ಈ ಮಾಹಿತಿಯನ್ನು ಸಂಬಂಧಿಸಿದ ಬ್ಯಾಂಕ್‍ಗಳಿಗೆ ರವಾನಿಸಲಾಗಿದ್ದು, ಇವರಲ್ಲಿ ಬ್ಯಾಂಕ್ ಖಾತೆ ಹೊಂದಿಲ್ಲದೆ ಇರುವವರನ್ನು ಖಾತೆ ತೆರೆಯುವಂತೆ ಮಾಡಲು ಸೂಚಿಸಲಾಗಿದೆ.

ಆಯಾ ಬ್ಯಾಂಕ್‍ನವರು ಈ ನಿಟ್ಟಿನಲ್ಲಿ ಕ್ರಮ ವಹಿಸಿರುವದಾಗಿ ದೇವಯ್ಯ ತಿಳಿಸಿದರು. ಶಾಶ್ವತ ಕೆಲಸದವರಿದ್ದರೆ ಸಮಸ್ಯೆ ಇಲ್ಲ. ದಿನಗೂಲಿ ಆಧಾರದಲ್ಲಿ ಒಂದೊಂದು ಕಡೆ ಕೆಲಸ ನಿರ್ವಹಿಸುತ್ತಿದ್ದರೆ ಖಾತೆ ಇಲ್ಲದಿದ್ದಲ್ಲಿ ವೇತನ ನೀಡುವದು ಕಷ್ಟ ಸಾಧ್ಯವಾಗಿದೆ ಎಂಬದು ಇವರ ಅಭಿಪ್ರಾಯವಾಗಿದೆ.