ಕುಶಾಲನಗರ, ಅ. 1: ಕಾಫಿಯ ಆಂತರಿಕ ಬಳಕೆಯ ಮೂಲಕ ಕಾಫಿಗೆ ಹೆಚ್ಚಿನ ಉತ್ತೇಜನ ದೊರಕಿಸಲು ಸಾಧ್ಯ ಎಂದು ಕೊಡಗು ಜಿಲ್ಲಾಧಿಕಾರಿ ಆರ್.ವಿ.ಡಿಸೋಜ ಅಭಿಪ್ರಾಯ ವ್ಯಕ್ತಪಡಿಸಿದರು. ವಿಶ್ವ ಕಾಫಿ ದಿನದ ಅಂಗವಾಗಿ ಪ್ರವಾಸಿ ತಾಣ ದುಬಾರೆಯಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಆಶ್ರಯದಲ್ಲಿ ಕಾಫಿ ತಯಾರಿಸುವ ವಿಧಾನದ ಕುರಿತು ಪ್ರವಾಸಿಗರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆದ ‘ಕಾಫಿ ದಿನ’ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಸ್ವಾದಿಷ್ಟ ಕಾಫಿ ನೀಡುವ ಮೂಲಕ ಉದ್ಯಮವನ್ನು ಜನಪ್ರಿಯ ಗೊಳಿಸಬೇಕಾಗಿದೆ ಎಂದ ಜಿಲ್ಲಾಧಿಕಾರಿಗಳು ವಿಶ್ವ ದರ್ಜೆಯ ಕಾಫಿ ಉತ್ಪಾದನಾ ಕೇಂದ್ರವಾಗಿರುವ ಕೊಡಗು ಜಿಲ್ಲೆ ಈ ವಿಷಯದಲ್ಲಿ ವಿಫಲ ವಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾ ಧಿಕಾರಿ ಏಡುಕೊಂಡಲು ಮಾತನಾಡಿ, ಪ್ರತಿಯೊಬ್ಬರೂ ಸ್ಥಳೀಯವಾಗಿ ಕಾಫಿಯ ಉತ್ಪನ್ನಗಳನ್ನು ಬಳಕೆ ಮಾಡುವ ಮೂಲಕ ಉತ್ತಮ ಮಾರುಕಟ್ಟೆ ಸೃಷ್ಟಿ ಮಾಡಲು ಸಾಧ್ಯ ಎಂದರು.
ಪ್ರವಾಸೋದ್ಯಮ ಇಲಾಖೆಯ ಪ್ರಭಾರ ನಿರ್ದೇಶಕರಾದ ಜಗನ್ನಾಥ್ ಮಾತನಾಡಿ, ಕೊಡಗಿನ ಜೇನುತುಪ್ಪದಂತೆ
(ಮೊದಲ ಪುಟದಿಂದ) ಪ್ರಸಕ್ತ ಕಾಫಿ ಕೂಡ ಕಲಬೆರಕೆ ಆಗುತ್ತಿರುವದು ಕಂಡುಬಂದಿದೆ. ಈ ಮೂಲಕ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಅಧಿಕವಾಗಿದ್ದು ಈ ನಿಟ್ಟಿನಲ್ಲಿ ಜಾಗೃತಿ ಮೂಡಬೇಕಾಗಿದೆ. ಹೋಟೆಲ್ಗಳ ಮೂಲಕ ಪ್ರವಾಸಿಗರಿಗೆ ಸ್ವಾದಿಷ್ಟ ಕಾಫಿ ನೀಡುವ ಮೂಲಕ ಸ್ಥಳೀಯ ಮಾರುಕಟ್ಟೆ ವೃದ್ಧಿಸಲು ಸಾಧ್ಯ ಎಂದರು.
ಮಡಿಕೇರಿಯ ಅಪ್ಪಂಗಳ ಸಾಂಬಾರು ಮಂಡಳಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಅಂಕೇಗೌಡ ಮಾತನಾಡಿ, ಕಾಫಿ ಬಳಕೆಯಿಂದ ಆರೋಗ್ಯವರ್ಧನೆ ಸಾಧ್ಯ. ಭಾರತದ ಕಾಫಿಗೆ ವಿಶ್ವಮಟ್ಟದಲ್ಲಿ ಬೇಡಿಕೆಯಿದ್ದು ಮನೆಮನೆಗಳಲ್ಲಿ ಕಾಫಿ ಸಂಸ್ಕøತಿ ಬೆಳೆಯಬೇಕಾಗಿದೆ ಎಂದರು.
ಕಾಫಿ ಜಾಗೃತಿ ಮಹಿಳಾ ಸಂಘದ ಅಧ್ಯಕ್ಷೆ ಚಿತ್ರಾ ಸುಬ್ಬಯ್ಯ ಮಾತನಾಡಿ, ಕಾಫಿ ಕೃಷಿಗೆ ಉತ್ತೇಜನ ನೀಡುವ ದೃಷ್ಠಿಯಿಂದ ಪ್ರವಾಸಿ ಕೇಂದ್ರದಲ್ಲಿ ಕಾಫಿ ದಿನವನ್ನು ಆಚರಿಸಲಾಗಿದೆ. ದುಬಾರೆ ಪ್ರವಾಸಿ ಕೇಂದ್ರಕ್ಕೆ ಆಗಮಿಸುವ ಪ್ರವಾಸಿಗರಿಗೆ ಉಚಿತ ಕಾಫಿ ನೀಡುವದರೊಂದಿಗೆ ಸ್ವಾದಿಷ್ಟ ಕಾಫಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುವದು ಎಂದರು. ಕಾಫಿ ಸೇವನೆ ಮತ್ತು ತಯಾರಿಸುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾಯಕದಲ್ಲಿ ಕೊಡಗು ಮಹಿಳಾ ಜಾಗೃತಿ ಸಂಘ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವದಾಗಿ ಮಾಹಿತಿ ನೀಡಿದರು.
ಕೊಡಗು ಜಿಲ್ಲೆಗೆ ವಾರ್ಷಿಕ 40 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಿದ್ದು ಅವರಿಗೆ ಸ್ವಾದಿಷ್ಟ ಕಾಫಿ ನೀಡುವ ಯೋಜನೆ ಮೂಲಕ ಕಾಫಿ ಕ್ಷೇತ್ರದ ಅಭಿವೃದ್ಧಿಗೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಕ್ರಮಕೈಗೊಳ್ಳಬೇಕಿದೆ ಎಂದು ಮನವಿ ಮಾಡಿದರು.
ದುಬಾರೆ ಪ್ರವಾಸಿ ಕೇಂದ್ರಕ್ಕೆ ಆಗಮಿಸಿದ ಪ್ರವಾಸಿಗರಿಗೆ ಸಂಘದ ಕಾರ್ಯಕರ್ತರು ಉಚಿತ ಕಾಫಿ ನೀಡುವ ಮೂಲಕ ಕಾಫಿ ಕೃಷಿಗೆ ಉತ್ತೇಜನ ನೀಡುವ ಬಗ್ಗೆ ಮಾಹಿತಿ ಒದಗಿಸಿದರು. ಇದೇ ಸಂದರ್ಭ ಕಾರುಗುಂದದ ರಾಜರಾಜೇಶ್ವರಿ ಸ್ವಸಹಾಯ ಸಂಘದ ಕಾರ್ಯಕರ್ತರಿಂದ ಕಾಫಿ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ನಡೆಯಿತು.
ಈ ಸಂದರ್ಭ ಸಂಘದ ಕಾರ್ಯದರ್ಶಿ ಅನಿತಾ ನಂದ, ಖಜಾಂಚಿ ಭಾವನ ಪ್ರವೀಣ್, ರಾಜರಾಜೇಶ್ವರಿ ಸ್ವಸಹಾಯ ಸಂಘದ ಪದಾಧಿಕಾರಿಗಳು, ಕೂರ್ಗ್ ಎಕ್ಸೋಟಿಕ ಕಾಫಿ ಸಂಸ್ಥೆಯ ಪ್ರಮುಖರಾದ ಪೂರ್ಣಿಮಾ ವಿರೂಪಾಕ್ಷ, ಕೊಡಗು ಜಿಲ್ಲಾ ಬೆಳೆಗಾರರ ಸಂಘದ ಪ್ರಮುಖರಾದ ಅಪ್ಪಯ್ಯ, ನಂದಾ ಬೆಳ್ಯಪ್ಪ ಮತ್ತಿತರರಿದ್ದರು.