ಮಡಿಕೇರಿ, ಆ. 22: ಕೊಡಗು ಜಿಲ್ಲೆಯಲ್ಲಿ ಆಗಾಗ್ಗೆ ನಡೆಯುತ್ತಿರುವ ಅಹಿತಕರ ಘಟನೆಗಳ ಕುರಿತು ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಜಿಲ್ಲೆಯಲ್ಲಿ ಎಲ್ಲಾ ಸಮುದಾಯದ ಜನರು ಅನ್ಯೋನ್ಯತೆಯಿಂದ ಪ್ರೀತಿ, ವಿಶ್ವಾಸದಿಂದ ಬದುಕು ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕೋಮು - ದ್ವೇಷ ಎಲ್ಲೇ ಮೀರಿ ಬೆಳವಣಿಗೆ ಸಾಧಿಸುತ್ತಿದೆ. ಧಾರ್ಮಿಕ ಕೇಂದ್ರಗಳ ಮೇಲೆ ಕೆಲ ಸಂಘಟನೆಗಳು ಕಲ್ಲು ಬಿಸಾಡಿ ಬಾಂಧವ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಜಿಲ್ಲಾಡಳಿತದ ಅನುಮತಿ ಪಡೆಯದೇ ಬಂದ್, ಪ್ರತಿಭಟನೆ, ಚಳುವಳಿಗಳನ್ನು ತಮಗೆ ತೋಚಿದಂತೆ ನಡೆಸುತ್ತಿದ್ದಾರೆ.
ಬಂದ್‍ಗಳನ್ನು ಮಾಡಬಾರದೆಂದು ನ್ಯಾಯಾಲಯಗಳು ಆದೇಶ ಮಾಡಿದ್ದರೂ ಯಾವದೇ ಅನುಮತಿ ಪಡೆಯದೇ ಬಂದ್ ಮಾಡುವದರ ಮೂಲಕ ಜಿಲ್ಲೆಯ ಜನರ ದಿನನಿತ್ಯದ ಬದುಕಿಗೆ ಅಡಚಣೆ ಉಂಟು ಮಾಡುತ್ತಿದ್ದಾರೆ. ಶಾಲಾ - ಕಾಲೇಜು ವಿದ್ಯಾರ್ಥಿಗಳನ್ನು ಬಲಾತ್ಕಾರವಾಗಿ ಪ್ರತಿಭಟನೆಗೆ ಕರೆತಂದು ಅವರ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟು ಮಾಡುತ್ತಿದ್ದಾರೆ. ದೇಶದ್ರೋಹಿ ಕೆಲಸ ಮಾಡುವವರು ಯಾರೇ ಆದರೂ ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳಬೇಕು. ಇದರಿಂದ ಅಮಾಯಕರಿಗೆ ಅನ್ಯಾಯವಾಗಬಾರದು. ಕೋಮು ದ್ವೇಷವನ್ನು ಬಿತ್ತುವವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.