ಶ್ರೀಮಂಗಲ, ಅ. 3 : ಜಿಲ್ಲೆಯಾದ್ಯಂತ ವಲಸೆ ಬಂದಿರುವ ಕಾರ್ಮಿಕರು ತಾವು ಅಸ್ಸಾಂ ರಾಜ್ಯದ ನಾಗರಿಕರೆಂದು ಚುನಾವಣಾ ಗುರುತಿನ ಚೀಟಿ ಹೊಂದಿದ್ದು, ಇದನ್ನು ಭಾರತೀಯ ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ ಇದು ಅಸಲಿಯೋ ಅಥವಾ ನಕಲಿಯೋ ಎಂಬ ಬಗ್ಗೆ ಪರಿಶೀಲಿಸಿ ಖಚಿತ ಪಡಿಸಿಕೊಳ್ಳುವ ಜವಾಬ್ದಾರಿ ಅವರಿಗೆ ಅಶ್ರಯ ನೀಡಿದ ಪ್ರತಿಯೊಬ್ಬ ಬೆಳೆಗಾರರದ್ದಾಗಿದೆ ಎಂದು ಜಿಲ್ಲಾ ಬಿ.ಜೆ.ಪಿ ಮಾಜಿ ಅಧ್ಯಕ್ಷ ಮಾಚಿಮಾಡ ಎಂ.ರವೀಂದ್ರ ಹೇಳಿದರು.
ಕಾನೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪೊಲೀಸ್ ಇಲಾಖೆ ಹಾಗೂ ಬೆಳೆಗಾರರ ನಡುವೆ ವಲಸೆ ಕಾರ್ಮಿಕರ ಗುರುತಿನ ಚೀಟಿ ಪರಿಶೀಲನೆ ಕಾರ್ಯಕ್ರಮವನ್ನು ಸಂಘಟಿಸಿ ಅವರು ಮಾತನಾಡಿದರು. ಅಕ್ರಮ ಬಾಂಗ್ಲಾ ವಲಸಿಗರನ್ನು ಕೊಡಗು ಜಿಲ್ಲೆಯಿಂದ ಹೊರ ಕಳುಹಿಸುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಾದ್ಯಂತ ವಿಶೇಷ ಪೊಲೀಸ್ ತಂಡಗಳನ್ನು ರಚನೆ ಮಾಡಿ ಮಾಹಿತಿ ಕಲೆಹಾಕುತ್ತಿದ್ದು, ಇದರ ಬಗ್ಗೆ ಬೆಳೆಗಾರರಲ್ಲಿ ತಪ್ಪು ಮಾಹಿತಿ ಇದೆ. ಕೇವಲ ಚುನಾವಣಾ ಆಯೋಗದ ಗುರುತಿನ ಚೀಟಿ ಇದ್ದ ಮಾತ್ರಕ್ಕೆ ಅವರು ಅಸ್ಸಾಂ ರಾಜ್ಯದಿಂದ ಬಂದ ಕೂಲಿ ಕಾರ್ಮಿಕರಾಗುವದಿಲ್ಲ.
ಬಾಂಗ್ಲಾದಿಂದ ಆಗಮಿಸಿರುವ ಕಾರ್ಮಿಕರನ್ನು ವಿಚಾರಿಸಿದಾಗ ಆಧಾರ್ ನೊಂದಣಿ ಪ್ರಕ್ರಿಯೆ ದೇಶಾದ್ಯಂತ ಏಕಕಾಲದಲ್ಲಿ ಆರಂಭವಾಗಿದೆ. ಆದರೆ ಯಾರೊಬ್ಬರ ಬಳಿಯೂ ಆಧಾರ್ ಕಾರ್ಡ್ ಇಲ್ಲ ಎನ್ನುವದು ಇವರು ಅಸ್ಸಾಂನ ನಾಗರಿಕರು ಅಲ್ಲ ಎನ್ನುವದನ್ನು ಪುಷ್ಠೀಕರಿಸುತ್ತದೆ ಎಂದು ರವೀಂದ್ರ ಆತಂಕ ವ್ಯಕ್ತಪಡಿಸಿದರು.
ತಮ್ಮ ತೋಟಗಳ ನಿರ್ವಹಣೆ ಹಾಗೂ ಕೆಲಸಕ್ಕಾಗಿ ಅಕ್ರಮ ಬಾಂಗ್ಲಾ ದೇಶದ ವಲಸಿಗರಿಗೆ ಆಶ್ರಯ ನೀಡುವಂತ ಗಂಭೀರ ಅಪರಾಧವನ್ನು ಬೆಳೆಗಾರರು ತಮ್ಮ ಮೈಮೇಲೆ ಎಳೆದುಕೊಳ್ಳದೆ ಇವರ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಅದು ಸರಿಯಾಗಿದ್ದರೆ ಮಾತ್ರ ಕೆಲಸಕ್ಕೆ ನಿಯೋಜಿಸಿಕೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿಯವರು ಹಾಗೂ ಪೊಲೀಸ್ ವರಿಷ್ಠಾಧಿಕಾರಿಯವರು ನಿರ್ದೇಶನ ನೀಡಿದ್ದಾರೆ. ಇದನ್ನು ಚಾಚು ತಪ್ಪದೆ ಬೆಳೆಗಾರರು ಪಾಲಿಸಬೇಕು. ಇತ್ತ ನಿರ್ಲಕ್ಷ್ಯ ವಹಿಸಿ ಮುಂದೆ ಇಂತವರಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ, ಗಂಭೀರ ಅಪರಾಧವೆಸಗುವದನ್ನು ತಡೆಗಟ್ಟುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ರವೀಂದ್ರ ಹೇಳಿದರು.
ಸಭೆಯಲ್ಲಿ ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್, ಗ್ರಾ.ಪಂ. ಅಧ್ಯಕ್ಷೆ ಲತಾಕುಮಾರಿ, ಮಾಜಿ ಅಧ್ಯಕ್ಷ ಕಾಡ್ಯಮಾಡ ಭರತ್, ಸದಸ್ಯ ಸುಳ್ಳಿಮಾಡ ದೀಪಕ್, ಕಾಂಗ್ರೆಸ್ ಮುಖಂಡ ಸುಳ್ಳಿಮಾಡ ವಸಂತ, ಉದ್ಯಮಿ ಎಸ್.ಎಂ. ಬಸಪ್ಪ, ಪ್ರಮುಖ ಬೆಳೆಗಾರರಾದ ಸುಳ್ಳಿಮಾಡ ರಮೆಶ್, ಅಳಮೇಂಗಡ ತಮ್ಮಯ್ಯ, ದಿನುಮಣಿ, ವಿಠಲ, ಜಪ್ಪು, ಕೋತೂರು ಗ್ರಾಮದ ಎಂ.ಎನ್ ಸತೀಶ್, ಕಾಡ್ಯಮಾಡ ಮಧು, ಅಜ್ಜಿಕುಟ್ಟಿರ ಶಾಂತ. ವಿ.ಆರ್.ಜಯರಾಮ್, ಬಸಪ್ಪಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.