ಭಾಗಮಂಡಲ, ಅ. 6: ಭಾಗಮಂಡಲದಿಂದ ತಲಕಾವೇರಿ ತನಕ ರಸ್ತೆ ಬದಿಯಲ್ಲಿನ ಕಾಡನ್ನು ಸ್ವಚ್ಛಗೊಳಿಸುವ ಕಾಮಗಾರಿ ಅಸಮರ್ಪಕವಾಗಿದೆ ಎಂದು ಆಕ್ಷೇಪಿಸಿ ಸ್ಥಳೀಯರು ಈ ಕೆಲಸಕ್ಕೆ ತಡೆಯೊಡ್ಡಿದ ಪ್ರಕರಣ ಇಂದು ನಡೆದಿದೆ.ತಲಕಾವೇರಿ ಜಾತ್ರೆ ಅಂಗವಾಗಿ ಭಾಗಮಂಡಲದಿಂದ ತಲಕಾವೇರಿ ತನಕ ರಸ್ತೆ ಬದಿಯ ಕಾಡನ್ನು ಕಡಿಯುವ ಕೆಲಸವನ್ನು ಸಂಬಂಧಿಸಿದ ಇಲಾಖೆ ವತಿಯಿಂದ ಯಂತ್ರ ಬಳಸಿ ಕೈಗೊಳ್ಳಲಾಗಿತ್ತು. ಆದರೆ ರಸ್ತೆ ಬದಿ ಅಪಾಯಕಾರಿಯಂತಾಗಿ ಆವರಿಸಿರುವ ಕಾಡನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸದೆ ನಾಮಕಾವಸ್ಥೆಯ ರೀತಿಯಲ್ಲಿ ಕೇವಲ ಕೆಳಭಾಗವನ್ನು ಮಾತ್ರ ತೆರವುಗೊಳಿಸಲಾಗುತ್ತಿದೆ. ತಿರುವುಗಳಲ್ಲಿ ಈ ಕಾಡು ಅಪಾಯಕಾರಿಯಾಗಿದೆ. ರಸ್ತೆಯ ಇಕ್ಕೆಲಗಳನ್ನು ಪೂರ್ಣ ಪ್ರಮಾಣದಲ್ಲಿ ಸಮರ್ಪಕ ರೀತಿಯಲ್ಲಿಡಬೇಕು ಎಂದು ಆಗ್ರಹಿಸಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಇಂಜಿನಿಯರ್ ಸೋಮಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭ ಜಿ.ಪಂ. ಸದಸ್ಯ ಕುಮಾರ್, ಗ್ರಾ.ಪಂ. ಸದಸ್ಯರಾದ ರಾಜಾರೈ, ಭಾಸ್ಕರ, ಪುರುಷೋತ್ತಮ, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

-ಕೆ.ಡಿ. ಸುನಿಲ್.