ಸೋಮವಾರಪೇಟೆ,ನ.11: ರಾಯಚೂರಿನಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿ ಆಚರಣೆ ವೇಳೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವ ಮೂಲಕ ತಮ್ಮ ಸ್ಥಾನದ ಘನತೆಗೆ ಅಪಚಾರ ಎಸಗಿದ್ದು, ತಕ್ಷಣವೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ತಾಲೂಕು ಭಾರತೀಯ ಜನತಾ ಪಾರ್ಟಿ ಆಗ್ರಹಿಸಿ, ಪ್ರತಿಭಟನೆ ನಡೆಸಿತು.
ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಇಲ್ಲಿನ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿಯನ್ನು ರಚಿಸಿ ಸಚಿವ ತನ್ವೀರ್ ಸೇಠ್ ವಿರುದ್ಧ ಘೋಷಣೆಗಳನ್ನು ಕೂಗಿದರು. ತಕ್ಷಣವೇ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ನಂತರ ಇಲ್ಲಿನ ತಾಲೂಕು ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ತಹಶೀಲ್ದಾರ್‍ರಿಗೆ ಮನವಿ ಪತ್ರ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪೂರ್ಣಿಮ ಗೋಪಾಲ್, ಬಿ.ಜೆ. ದೀಪಕ್, ತಾಲೂಕು ಪಂಚಾಯಿತಿ ಸದಸ್ಯರಾದ ತಂಗಮ್ಮ, ಪಟ್ಟಣ ಪಂಚಾಯಿತಿ ಸದಸ್ಯ ಬಿ.ಎಂ. ಸುರೇಶ್, ಪಕ್ಷದ ತಾಲೂಕು ಕಾರ್ಯದರ್ಶಿ ಮನುಕುಮಾರ್ ರೈ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ಕೊಮಾರಿ ಸತೀಶ್, ನಗರ ಘಟಕದ ಅಧ್ಯಕ್ಷ ಸೋಮೇಶ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ನಗರ ಘಟಕದ ಶರತ್ ಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.