ಕುಶಾಲನಗರ, ಆ. 17: ಪಟ್ಟಣದ ಹೃದಯ ಭಾಗದಲ್ಲಿರುವ ಕುಶಾಲನಗರದ ಸರಕಾರಿ ಬಸ್ ನಿಲ್ದಾಣ ಆವರಣದಲ್ಲಿ ಅಶುಚಿತ್ವ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಏಕ ವ್ಯಕ್ತಿಯಿಂದ ವಿನೂತನ ಪ್ರತಿಭಟನೆ ಯೊಂದು ನಡೆಯಿತು. ನಗರದ ಬಿಜೆಪಿ ಘಟಕ ಅಧ್ಯಕ್ಷ ಕೆ.ಜಿ.ಮನು ಏಕಾಂಗಿ ಯಾಗಿ ಕಸದ ರಾಶಿ ಮೇಲೆ ಕುಳಿತು ಮೌನ ಪ್ರತಿಭಟನೆ ಮೂಲಕ ಧರಣಿ ನಡೆಸಿ ಅಧಿಕಾರಿ ಗಳಿಗೆ ಶುಚಿತ್ವದ ಬಗ್ಗೆ ಗಮನಹರಿಸುವಂತೆ ಒತ್ತಾಯಿಸಿದ ಘಟನೆ ಇದಾಗಿದೆ.ಕುಶಾಲನಗರ ಸರಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಕಳೆದ ಎರಡು ವರ್ಷಗಳಿಂದ ಕಸ ವಿಲೇವಾರಿ ಆಗದಿರುವ ಹಿನ್ನೆಲೆಯಲ್ಲಿ ಇಡೀ ವಾತಾವರಣದಲ್ಲಿ ಮೂಗು ಮುಚ್ಚಿ ತೆರಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಬಸ್ ನಿಲ್ದಾಣದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಮನೋಭಾವನೆ ಖಂಡಿಸಿ ಈ ಪ್ರತಿಭಟನೆ ನಡೆಸಿರುವದಾಗಿ ಕೆ.ಜಿ. ಮನು ತಿಳಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ಪತ್ರಿಕೆ, ಮಾಧ್ಯಮಗಳಲ್ಲಿ ವರದಿಯಾದರೂ ಅಧಿಕಾರಿಗಳು ಮಾತ್ರ ಮೌನವ್ರತ ತಾಳಿದ್ದರು.
ಈ ಸಂದರ್ಭ ಸ್ಥಳಕ್ಕೆ ಸ್ಥಳೀಯ ಸಂಚಾರ ನಿಯಂತ್ರಣಾಧಿಕಾರಿ ಆಗಮಿಸಿ ಪ್ರತಿಭಟನಾಕಾರನ ಮನವೊಲಿಸಿದರೂ ಯಾವದೇ ಫಲ ದೊರಕದ ಹಿನ್ನೆಲೆಯಲ್ಲಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ ಶಿರಾಳಿ ಅವರು ದೂರವಾಣಿ ಮೂಲಕ 4 ದಿನಗಳ ಕಾಲಾವಕಾಶ ಕೋರಿ ಬಸ್ ನಿಲ್ದಾಣದ ಆವರಣ ಶುಚಿತ್ವಗೊಳಿಸುವದಾಗಿ ಭರವಸೆ ನೀಡಿದರು.