ವೀರಾಜಪೇಟೆ, ಆ. 29: ಪಟ್ಟಣದ ಗಾಂಧಿ ನಗರದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಭವನ ಸೂಕ್ತ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯಿಂದ ಕೂಡಿದೆ. ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ ಎಂದು ಗಾಂಧಿ ನಗರ ನಿವಾಸಿ ಪಿ.ಎ. ಮಂಜುನಾಥ್ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರಿ ನೌಕರರ ಭವನ 6 ಕೋಣೆಗಳನ್ನು ಹೊಂದಿದ್ದು, ತಲಾ ರೂ. 1,500 ಗಳಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಬಾಡಿಗೆಗೆ ನೀಡಲಾಗಿದೆ. ಸಭಾಂಗಣ ವನ್ನು ಸಾರ್ವಜನಿಕರ ವಿವಿಧ ಕಾರ್ಯಕ್ರಮಗಳಿಗೆ ಬಾಡಿಗೆಗೆ ನೀಡಲಾಗುತ್ತಿದ್ದು, ಇದಕ್ಕಾಗಿ ರೂ. 2,500 ನಿಗದಿ ಮಾಡಿದ್ದಾರೆ. ಆದರೆ ಭವನ ಕನಿಷ್ಟ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಭವನದಲ್ಲಿ ಮೂರು ಶೌಚಾಲಯ ವಿದ್ದು, ಒಂದು ಶೌಚಾಲಯದ ಬಾಗಿಲು ಕಿತ್ತು ಹೋಗಿದೆ. ಉಳಿದ 2 ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸೂಕ್ತ ಶೌಚಾಲಯವೇ ಇಲ್ಲವಾಗಿದೆ. ಭವನದ ಆವರಣ ಪೂರ್ಣವಾಗಿ ಗಿಡಗಂಟಿಗಳಿಂದ ತುಂಬಿದ್ದು ಸರಿಸೃಪಗಳ ತಾಣವಾಗಿದೆ. ಶುಚಿತ್ವಕ್ಕೆ ಆದ್ಯತೆ ನೀಡದೆ ಸಭಾಂಗಣವನ್ನು ಬಾಡಿಗೆಗೆ ನೀಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಕಾಲಿಡಲು ಅಸಹ್ಯವಾಗುವ ಸ್ಥಿತಿಯಲ್ಲಿದೆ.

ಶಾಸಕ ಕೆ.ಜಿ. ಬೋಪಯ್ಯ ಅವರು ಶಾಸಕರ ನಿಧಿಯಿಂದ ರೂ. 2 ಲಕ್ಷ ಅಡುಗೆ ಕೋಣೆಗೆ ನೀಡಿದ್ದರೂ ಸುಸಜ್ಜಿತ ಅಡುಗೆ ಕೋಣೆ ನಿರ್ಮಿಸಲು ವಿಫಲರಾಗಿದ್ದಾರೆ. ಕಟ್ಟಡದ ನಿರ್ವಹಣೆಯನ್ನು ನೋಡಿಕೊಳ್ಳುತ್ತಿರುವ ಸಂಘದ ಉಪಾಧ್ಯಕ್ಷ ಹಾಗೂ ಗ್ರಂಥಾಲಯದ ನಾಲ್ಕನೇ ದರ್ಜೆ ನೌಕರರೊಬ್ಬರು ತಮಗೆ ಇಷ್ಟ ಇದ್ದರೆ ಸಮಾರಂಭ ನಡೆಸಿ ಇಲ್ಲವಾದರೆ ಬೇರೆ ಕಡೆಗೆ ಹೋಗಿ ಎಂದು ಉಡಾಫೆಯ ಉತ್ತರ ನೀಡುತ್ತಿದ್ದಾರೆ.

ಜನಪರ ಉದ್ದೇಶದಿಂದ ಸರ್ಕಾರಿ ನೌಕರÀರ ಭವನ ನಿರ್ಮಿಸಿ ಸಾರ್ವಜನಿಕರೊಂದಿಗೆ ಉದ್ದಟತನದಿಂದ ವರ್ತಿಸುವ ಇವರು ಎಷ್ಟರ ಮಟ್ಟಿಗೆ ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲು ಸಾಧ್ಯ. ಈ ಸರಕಾರಿ ನೌಕರರ ಭವನದಲ್ಲಿ ಸಭಾಂಗಣ ಬಾಡಿಗೆಗೆ ಪಡೆಯುವವರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಎಲ್ಲಕ್ಕಿಂತಲೂ ಸಂಘದ ಉಪಾಧ್ಯಕ್ಷರ ವರ್ತನೆ ಖಂಡನೀಯ. ಸರಕಾರದಿಂದ ಅನುದಾನ ಪಡೆದಿದ್ದರೂ ಅದನ್ನು ಭವನಕ್ಕೆ ಸೂಕ್ತವಾಗಿ ಬಳಸಿಲ್ಲ ಎಂದು ಮಂಜುನಾಥ್ ಆರೋಪಿಸಿದ್ದಾರೆ.

ಕೆಲಸಗಾರರ ಅಭಾವ ಹಾಗೂ ಮಳೆಗಾಲವಾದ ಕಾರಣ ಗಿಡಗಂಟಿಗಳನ್ನು ಕಡಿಯಲು ಸಾಧ್ಯವಾಗಿಲ್ಲ. ಗಂಡಸರು ಕೆಳಗಿನ ಶೌಚಾಲಯವನ್ನು ಉಪಯೋಗಿಸಲಿ. ಮಹಿಳೆಯರು ಮೇಲಿನ ಶೌಚಾಲಯಕ್ಕೆ ತೆರಳಲಿ. ಕಟ್ಟಡದ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭಿಸುತ್ತೇವೆ ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎನ್. ವಿಶ್ವನಾಥ್ ‘ಶಕ್ತಿ’ಗೆ ಪ್ರತಿಕ್ರಿಯಿಸಿದ್ದಾರೆ.