ಸಿದ್ದಾಪುರ, ಆ. 1: ಅವೈಜ್ಞಾನಿಕ ರೀತಿಯ ಕಂದಕ ನಿರ್ಮಾಣದಿಂದಾಗಿ ಕಾಡಾನೆಗಳು ದಿನಂಪ್ರತಿ ಕಂದಕದ ಮೂಲಕವೇ ಸಂಚರಿಸುತ್ತಿದ್ದು, ಸ್ಥಳೀಯ ಬೆಳೆಗಾರರು ಹಾಗೂ ಕಾರ್ಮಿಕರು ಭಯದಲ್ಲೇ ಕಾಲಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಸಮೀಪದ ಮಾಲ್ದಾರೆ ಅರಣ್ಯದಂಚಿನಲ್ಲಿ ಲಕ್ಷಾಂತರ ರೂ ವೆಚ್ಚದಲ್ಲಿ ಅರಣ್ಯಕ್ಕೆ ಹೊಂದಿಕೊಂಡಂತೆ ಕಾಡಾನೆ ಕಾಡಿನಿಂದ ಹೊರಬರದಂತೆ ಕಂದಕ ನಿರ್ಮಿಸಿದ್ದು, ಅವೈಜ್ಞಾನಿಕ ಕಂದಕ ನಿರ್ಮಾಣದಿಂದ ಕಾಡಾನೆಗಳು ರಾಜಾರೋಷವಾಗಿ ಕಾಡಿನಿಂದ ತೋಟಗಳಿಗೆ ಲಗ್ಗೆಯಿಡುತ್ತಿದೆ. ಕೆಲವು ಕಡೆಗಳಲ್ಲಿ ಕಂದಕಗಳು ಇಳಿಜಾರಿನಿಂದ ನಿರ್ಮಿತವಾಗಿದ್ದು, ಕಾಡಾನೆಗಳಿಗೆ ನಡೆದಾಡಲು ದಾರಿ ಮಾಡಿಕೊಟ್ಟಂತಾಗಿದೆ. ಇದರಿಂದಾಗಿ ಕಾಡಾನೆಗಳು ದಿನಂಪ್ರತಿ ಇದೇ ಕಂದಕದ ಮೂಲಕ ಕಾಡಿನಿಂದ ತೋಟಕ್ಕೆ ಲಗ್ಗೆಯಿಡುತ್ತಿದ್ದು, ಸ್ಥಳೀಯ ಬೆಳೆಗಾರರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಮಾತ್ರವಲ್ಲದೇ ಕಾರ್ಮಿಕರೂ ಕೂಡ ಭಯದಿಂದಲೇ ತೋಟದಲ್ಲಿ ಕೆಲಸ ಮಾಡುವಂತಾಗಿದೆ. ಒಂದೆಡೆ ರೈತರು ಹಾಗೂ ಕಾರ್ಮಿಕರಿಗೆ ಸಮಸ್ಯೆಯಾದರೆ ಮುಖ್ಯ ಹೆದ್ದಾರಿಯ ಮೂಲಕ ಮೈಸೂರು, ಪಿರಿಯಾಪಟ್ಟಣ ರಸ್ತೆಯಲ್ಲಿ ದಿನಂಪ್ರತಿ ಕಂದಕವನ್ನು ಕಾಡಾನೆ ಹಾದುಹೋಗುತ್ತಿದ್ದು, ಪ್ರಯಾಣಿಕರು ಹಾಗೂ ವಾಹನ ಚಾಲಕರು ತೊಂದರೆ ಅನುಭವಿಸುವಂತಾಗಿದೆ. ರಾತ್ರಿ ವೇಳೆಯಲ್ಲಿ ಲಘು ವಾಹನದ ಮಾಲೀಕರು ಭಯದಿಂದಲೇ ಸಂಚರಿಸಬೇಕಾಗಿದೆ.

ಕಾಡಾನೆಗಳು ದಾಟದಂತೆ ಬೃಹÀತ್ ಕಂದಕ ನಿರ್ಮಿಸಬೇಕಾದಲ್ಲಿ ಚರಂಡಿಯಂತೆ ಗುಂಡಿ ತೆಗೆಯಲಾಗಿದ್ದು, ಸರಕಾರದ ಹಣವನ್ನು ದುರುಪಯೋಗ ಮಾಡಿದಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ರಾಜ್ಯಾದ್ಯಾಂತ ಕಾಡಾನೆ ಹಾವಳಿ ತಡೆಗಟ್ಟುವ ಉದ್ದೇಶದಿಂದ ಅರಣ್ಯದಂಚಿನಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಕಂದಕ ನಿರ್ಮಿಸಲಾಗಿದ್ದು, ಅವೈಜ್ಞಾನಿಕ ರೀತಿಯ ಕಂದಕ ನಿರ್ಮಾಣದಿಂದ ಸರಕಾರದ ಬೊಕ್ಕಸಕ್ಕೆ ಕತ್ತರಿ ಬೀಳುವದಲ್ಲದೇ, ಜನಸಾಮಾನ್ಯರಿಗೂ ತೊಂದರೆಯುಂಟಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖಾಧಿಕಾರಿಗಳು ಎಚ್ಚೆತ್ತುಕೊಂಡು ವೈಜ್ಞಾನಿಕ ರೀತಿಯ ಕಂದಕ ನಿರ್ಮಿಸಲು ಮುಂದಾಗಬೇಕಿದೆ. ಒಟ್ಟಿನಲ್ಲಿ ಸರಕಾರ ಹಾಗೂ ಅರಣ್ಯ ಇಲಾಖೆಯ ಅವೈಜ್ಞಾನಿಕ ಕಂದಕ ನಿರ್ಮಾಣದಿಂದಾಗಿ ಅದೆಷ್ಟೋ ಕಾರ್ಮಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿರುವದು ವಿಪರ್ಯಾಸವೇ ಸರಿ. ಈ ಬಗ್ಗೆ ಅರಣ್ಯ ಸಚಿವರು ಇತ್ತ ಗಮನ ಹರಿಸಿ, ಕಾಡಾನೆ ಮಾನವ ಸಂಘರ್ಷವನ್ನು ಕೊನೆಗೊಳಿಸಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.